SUDDIKSHANA KANNADA NEWS/ DAVANAGERE/ DATE:26-02-2025
ದಾವಣಗೆರೆ: ದಾವಣಗೆರೆಯಲ್ಲಿ ಹಾಫ್ ಹೆಲ್ಮೆಟ್ ಮತ್ತು ಐಎಸ್ಐ ಮಾರ್ಕ್ ಇಲ್ಲದ ಹೆಲ್ಮೆಟ್ ಗಳ ವಶ ಕಾರ್ಯಾಚರಣೆ ಮುಂದುವರಿದಿದೆ. ಇದುವರೆಗೆ ಬರೋಬ್ಬರಿ ಆರು ಸಾವಿರಕ್ಕೂ ಹೆಚ್ಚು ಗುಣಮಟ್ಟವಲ್ಲದ ಹೆಲ್ಮೆಟ್ ಗಳನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಆದ್ರೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅತ್ಯಾಪ್ತ ಹಾಗೂ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೇಸಿಗೆ ಕಾಲವಿದ್ದು, ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸಿರುವುದರಿಂದ ಸವಾರರಿಗೆ ತೊಂದರೆಯಾಗುತ್ತಿದೆ. ಈ ಕಾರಣಕ್ಕೆ ಬೇಸಿಗೆ ಕಾಲ ಮುಗಿದ ಬಳಿಕ ಅಂದರೆ ಮಳೆಗಾಲದಿಂದ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಫೆ. 27ರಂದು ಸಂಜೆ 5 ಗಂಟೆಗೆ ನಗರದ ಹೈ ಸ್ಕೂಲ್ ಮೈದಾನದಲ್ಲಿರುವ ಬ್ಯಾಸ್ಕೆಟ್ ಬಾಲ್ ಗ್ರೌಂಡಿನಲ್ಲಿ ಬೇಸಿಗೆಗಾಲದಲ್ಲಿ ಹೆಲ್ಮೆಟ್ ಹಾಕುವುದು ಕಡ್ಡಾಯ ಮಾಡಿರುವ ಕುರಿತು ಸಮಾಲೋಚನ ಸಭೆಯನ್ನು ಕರೆದಿದ್ದಾರೆ. ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ದಿನೇಶ್ ಕೆ. ಶೆಟ್ಟಿ ಮನವಿ ಮಾಡಿದ್ದಾರೆ.
ದಾವಣಗೆರೆ ವಾಹನ ಚಾಲಕರಿಗೆ ಬಹಳ ತೊಂದರೆ ಆಗುತ್ತಿರುವುದರಿಂದ ಮಳೆಗಾಲದ ತನಕ ಮುಂದೂಡಬೇಕೆಂದು ಮನವಿ ಪತ್ರವನ್ನು ಕೊಡಲಾಗುವುದು. ಹೆಚ್ಚಿನ ಸಂಖ್ಯೆ ಜನರು ಬಂದರೆ ಮುಂದೂಡಿಸಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ನಿಲ್ಲದ ಕಾರ್ಯಾಚರಣೆ: ಹಾಫ್ ಹೆಲ್ಮೆಟ್, ಐಎಸ್ಐ ಮಾರ್ಕ್ ಇಲ್ಲದ, ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದಕ್ಕೆ ಬ್ರೇಕ್ ಹಾಕುವ ಕಾರ್ಯಾಚರಣೆ ಇಂದೂ ಮುಂದುವರಿದಿದೆ. ಸುರಕ್ಷತಾ ದೃಷ್ಟಿಯಿಂದ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಹಾಫ್ ಹೆಲ್ಮೆಟ್, ಗುಣಮಟ್ಟ ಇಲ್ಲದ ಕಾಟಾಚಾರಕ್ಕೆ ಎಂಬಂತೆ ಧರಿಸಿ ವಾಹನ ಚಲಾಯಿಸುವವರಿಗೆ ಇನ್ಮುಂದೆ ದಂಡ ಬೀಳುವುದು ಫಿಕ್ಸ್. ಈಗಾಗಲೇ ಆರು ಸಾವಿರಕ್ಕೂ ಹೆಚ್ಚು ಹಾಫ್ ಹೆಲ್ಮೆಟ್, ಐಎಸ್ಐ ಮಾರ್ಕ್ ಇಲ್ಲದ ಹೆಲ್ಮೆಟ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಶುಕ್ರವಾರದಿಂದ ಆರಂಭವಾಗಿರುವ ಹಾಫ್ ಹೆಲ್ಮೆಟ್ ಕಾರ್ಯಾಚರಣೆ ಬುಧವಾರವೂ ಮುಂದುವರಿದಿತ್ತು. ದಾವಣಗೆರೆ ನಗರದಲ್ಲಿ ಬರೋಬ್ಬರಿ ಆರು ಸಾವಿರ ಹಾಫ್ ಹೆಲ್ಮೆಟ್ ಮತ್ತು ಗುಣಮಟ್ಟಇಲ್ಲದ ಹೆಲ್ಮೆಟ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೋಟಾರ್ ಸೈಕಲ್ ಚಾಲಕರಿಗೆ ನಗರದ ಪ್ರಮುಖ ವೃತ್ತಗಳಾದ ಜಯದೇವ ವೃತ್ತ, ಅಂಬೇಡ್ಕರ್ ವೃತ್ತ, ಅರುಣಾ ಥಿಯೇಟರ್, ಸಂಗೊಳ್ಳಿ ರಾಯಣ್ಣ, ಎಸಿ ವೃತ್ತ, ಎಂ ಜಿ ವೃತ್ತ, ಗಡಿಯಾರ ಕಂಬ ವೃತ್ತಗಳಲ್ಲಿ ಹಾಫ್ ಹೆಲ್ಮೆಟ್, ಕಳಪೆ ಗುಣಮಟ್ಟದ ಹೆಲ್ಮೆಟ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಹಾಕಿಕೊಂಡು ಸಂಚರಿಸುವ ಮೋಟಾರ್ ಸೈಕಲ್ ಚಾಲಕರಿಗೆ ಸುರಕ್ಷಿತಾ ದೃಷ್ಟಿಯಿಂದ ಅವುಗಳನ್ನು ಧರಿಸದಂತೆ ಸೂಚನೆ ನೀಡಲಾಯಿತು.
ಪ್ಲಾಸ್ಟಿಕ್ ಹೆಲ್ಮೆಟ್ / ಹಾಫ್ ಹೆಲ್ಮೆಟ್ ಬದಲಾಗಿ ಐಎಸ್ಐ ಗುಣಮಟ್ಟದ ಸುರಕ್ಷಿತಾ ಹೆಲ್ಮೆಟ್ ಗಳನ್ನು ಧರಿಸಿ ಮೋಟಾರ್ ಸೈಕಲ್ ಚಲಾಯಿಸಿ ಅಪಘಾತದಂತ ಸಂದರ್ಭದಲ್ಲಿ ತಮ್ಮ ಜೀವನ ಹಾನಿಯನ್ನು ತಡೆಯಬೇಕು ಎಂದು ಅರಿವು ಮೂಡಿಸಲಾಯಿತು.
ಕಳೆದೆರಡು ದಿನಗಳಲ್ಲಿ ಸುಮಾರು 6000ಕ್ಕೂ ಹೆಚ್ಚು ಪ್ಲಾಸ್ಟಿಕ್, ಹಾಫ್ ಹೆಲ್ಮೆಟ್ ಗಳನ್ನು ನಾಶಪಡಿಸುವ ಸಲುವಾಗಿ ವಶಕ್ಕೆ ಪಡೆಯಲಾಯಿತು. ಕೇವಲ ಈ ಬಾರಿ ಐಎಸ್ಐ ಮಾರ್ಕ್ ಇರುವ ಗುಣಮಟ್ಟದ ಹೆಲ್ಮೆಟ್ ತಂದು ಧರಿಸಿದವರಿಗೆ ಹಾಗೂ
ಪ್ಲಾಸ್ಟಿಕ್ ಹೆಲ್ಮೆಟ್, ಹಾಫ್ ಹೆಲ್ಮೆಟ್ ಅನ್ನು ಅರಿತುಕೊಂಡು ವಶಕ್ಕೆ ನೀಡಿದವರಿಗೆ ಮಾತ್ರ ದಂಡ ವಿಧಿಸದೆ ತಿಳುವಳಿಕೆ ನೀಡಿ ಹಾಗೆ ಕಳುಹಿಸಲಾಯಿತು.
ಈ ವಿಶೇಷ ಕಾರ್ಯಚರಣೆಯು ಸೋಮವಾರ ಮತ್ತು ಮಂಗಳವಾರವೂ ವೇಗವಾಗಿ ಮುಂದುವರಿದಿದೆ. ಐಎಸ್ಐ ಮಾರ್ಕ್ ಇಲ್ಲದ ಕಳಪೆ, ಹಾಫ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಧರಿಸಿ ಮೋಟಾರ್ ಸೈಕಲ್ ಓಡಿಸುವ ಚಾಲಕರಿಗೆ ದಂಡ ವಿಧಿಸುವುದು ಖಚಿತ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಎಚ್ಚರಿಕೆ ನೀಡಿದ್ದಾರೆ.
ಎಸ್ಪಿ ಉಮಾ ಪ್ರಶಾಂತ್ ಅವರ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ್ ಮತ್ತು ಜಿ. ಮಂಜುನಾಥ ಹಾಗೂ ನಗರ ಡಿವೈಎಸ್ಪಿ ಶರಣ ಬಸವೇಶ್ವರ ಅವರ ಮಾರ್ಗದರ್ಶನದಲ್ಲಿ ದಾವಣಗೆರೆ ನಗರ ಸಂಚಾರ ಪೊಲೀಸ್ ಸಿಪಿಐ ನಲವಾಗಲು ಮಂಜುನಾಥ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.