Site icon Kannada News-suddikshana

ಪೊಲೀಸ್ ಪಬ್ಲಿಕ್ ಶಾಲಾ ವಿದ್ಯಾರ್ಥಿ ಮಂಡಳಿ ಉದ್ಘಾಟನೆ: ಎಸ್ಪಿ ಉಮಾ ಪ್ರಶಾಂತ್ ಮಕ್ಕಳಿಗೆ ಹೇಳಿದ ಕಿವಿಮಾತೇನು..?

ಪೊಲೀಸ್

ದಾವಣಗೆರೆ: ಜಿಲ್ಲೆಯ ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ಸಂಸತ್ತಿನ ಪದವಿ ಪ್ರದಾನ ಸಮಾರಂಭ ನಡೆಯಿತು.

ಈ ಸುದ್ದಿಯನ್ನೂ ಓದಿ: ಸಂವಿಧಾನ ಬದಲಾವಣೆ ಮಾಡಲು ಮುಂದಾದ್ರೆ ನೀವು ಉಳಿಯಲ್ಲ: ಮೋದಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್!

ಸಮಾರಂಭದಲ್ಲಿ ಮಾತನಾಡಿದ ಎಸ್ಪಿ ಉಮಾ ಪ್ರಶಾಂತ್ ಅವರು ಶಾಲೆಗಳಲ್ಲಿ ನಡೆಯುವ ವಿದ್ಯಾರ್ಥಿ ನಾಯಕನ ಆಯ್ಕೆ ಪ್ರಕ್ರಿಯೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೆನಪು ಮಾಡುತ್ತದೆ. ಮಕ್ಕಳು ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.

ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಅತ್ಯಂತ ಸರಳ ರೀತಿಯಲ್ಲಿ ಮಕ್ಕಳಿಗೆ ತಿಳಿಸುವಂತೆ ಮಾಡುವುದಲ್ಲದೆ ಚಿಕ್ಕಂದಿನಿಂದಲೇ ಚುನಾವಣಾ ಮಜಲುಗಳನ್ನು ಅರಿಯಲು ನೆರವಾಗುತ್ತದೆ. ಆದ ಕಾರಣ ಪೊಲೀಸ್ ಪಬ್ಲಿಕ್ ಶಾಲೆಯು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.

ಅಷ್ಟೇ ಅಲ್ಲದೆ ಮಕ್ಕಳು ಕಲಿಕೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಪ್ರಗತಿಯನ್ನು ಕಾಣುತ್ತಾ ರಾಷ್ಟ್ರದ ಸಂಪತ್ತಾಗಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಮಕ್ಕಳು ಎದುರಿಸುವ ಮಾನಸಿಕ ಹಾಗೂ ದೈಹಿಕ ಸವಾಲುಗಳನ್ನು ಶಿಕ್ಷಕರು ಅರಿತು ಪರಿಹಾರ ಕಂಡುಕೊಳ್ಳುವ ಮೂಲಕ ಮಕ್ಕಳ ಸಾಮಾಜಿಕ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿ ಕೊಡಬೇಕೆಂದು ಶಿಕ್ಷಕರಿಗೆ ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಿಎಆರ್‌ ಡಿವೈಎಸ್‌ಪಿ ಪ್ರಕಾಶ್ ಪಿ ಬಿ ಮಾತನಾಡಿ ಪ್ರಜಾಪ್ರಭುತ್ವ ಎಂಬುದು ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆಯಾಗಬೇಕು ಎಂಬ ಗಾಂಧೀಜಿಯವರ ಮಾತನ್ನು ನೆನಪಿಸುತ್ತ ಶಾಲಾ ಸಂಸತ್ತು ಚುನಾವಣಾ ಆಯೋಗದ ನೈಜ ಕಾರ್ಯ ಮಾದರಿಯನ್ನು ನೆನಪಿಸುತ್ತದೆ. ಮಕ್ಕಳು ಶಿಸ್ತು ಮತ್ತು ಜವಾಬ್ದಾರಿಯಿಂದ ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕೆಂದು ಹೇಳಿದರು.

ಶಾಲಾ ವಿದ್ಯಾರ್ಥಿ ಮಂಡಳಿಯ ನಾಯಕನಾಗಿ ಸಾತ್ವಿಕ್ ಎಸ್ ಕಾಡಜ್ಜಿ, ನಾಯಕಿಯಾಗಿ ವೇದ ಎಂ, ಕ್ರೀಡಾ ನಾಯಕಿಯಾಗಿ ಯಶಸ್ವಿನಿ ಬಿ ,ಎಸ್ ಹಾಗೂ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಘದ ನಾಯಕನಾಗಿ ಗಣೇಶ್ ಯು ಎಸ್ ರವರು ಆಯ್ಕೆಯಾಗಿದ್ದು ಇವರಿಗೆ ಪದವಿ ಪ್ರಧಾನ ಮಾಡಲಾಯಿತು.

ಶಾಲೆಯ ನಾಲ್ಕು ಹೌಸ್ ಗಳಾದ ಕಾವೇರಿ, ಶರಾವತಿ, ನೇತ್ರಾವತಿ ಹಾಗೂ ಕೃಷ್ಣ ಹೌಸ್ ಗಳ ನಾಯಕ ಮತ್ತು ಉಪನಾಯಕರನ್ನು ಆಯ್ಕೆ ಮಾಡಲಾಯಿತು. ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಮಂಜುಳಾ ಮಾಗೋಡ್, ದೈಹಿಕ ಶಿಕ್ಷಕ ಹಾಲೇಶ್ ಹಾಗೂ ಸವಿತಾ ,ಹರ್ಷಿಯ, ರಾಜು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ಶಾಲೆಯ ಪ್ರಭಾರ ಪ್ರಾಂಶುಪಾಲರಾದ ವಿನುತ ಆರ್ ಎನ್, ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ಪೋಷಕರು ಉಪಸ್ಥಿತರಿದ್ದರು.

Exit mobile version