SUDDIKSHANA KANNADA NEWS/ DAVANAGERE/ DATE:15-04-2025
ಬೆಂಗಳೂರು: ’ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬಾರದು’’ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ ಎನ್ನುವ ಹಸಿ ಹಸಿ ಸುಳ್ಳನ್ನು ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಹೇಳಿರುವುದು ಅತ್ಯಂತ ವಿಷಾದನೀಯವಾದುದು. ಮತೀಯ ದ್ವೇಷ ಹುಟ್ಟಿಸಬೇಕೆಂಬ ಏಕೈಕ ದುರುದ್ದೇಶದಿಂದ ಈ ರೀತಿಯ ಸುಳ್ಳುಗಳನ್ನು ಹೇಳುವ ಮಟ್ಟಕ್ಕೆ ದೇಶದ ಪ್ರಧಾನಿ ಇಳಿಯಬಾರದಿತ್ತು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾಷಣ ಮತ್ತು ಬರವಣಿಗೆಗಳ ಹನ್ನೆರಡು ಸಂಪುಟಗಳನ್ನು ಮಹಾರಾಷ್ಟ್ರ ಸರ್ಕಾರ ವರ್ಷಗಳ ಹಿಂದೆಯೇ ಪ್ರಕಟಮಾಡಿದೆ. ಅವುಗಳ ಕನ್ನಡ ಅನುವಾದವನ್ನು ನಮ್ಮ ಸರ್ಕಾರವೇ ಮುದ್ರಿಸಿದೆ. ಅಲ್ಲೆಲ್ಲಾದರೂ ಧರ್ಮಾಧಾರಿತ ಮೀಸಲಾತಿ ಬೇಡ ಇಲ್ಲವೇ ಬೇಕು ಎನ್ನುವ ಅಂಬೇಡ್ಕರ್ ಅವರ ಅಭಿಪ್ರಾಯದ ಉಲ್ಲೇಖ ಇದ್ದರೆ ಅದನ್ನು ಪ್ರಧಾನಿ ಮೋದಿಯವರು ದೇಶದ ಜನರ ಮುಂದಿಡಬೇಕು, ಇಲ್ಲವಾದರೆ ಇಂತಹದ್ದೊಂದು ಸುಳ್ಳನ್ನು ಹೇಳಿರುವುದಕ್ಕಾಗಿ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡಲಾಗಿರುವ ಮೀಸಲಾತಿ ಖಂಡಿತ ಧರ್ಮಾಧಾರಿತವಾದುದ್ದಲ್ಲ ಎನ್ನುವ ಸರಳವಾದ ಸತ್ಯವನ್ನು ನರೇಂದ್ರ ಮೋದಿ ಅವರು ಅರ್ಥಮಾಡಿಕೊಳ್ಳದೆ ಹೋಗಿರುವುದು ದುರಂತವೇ ಸರಿ. ಮುಸ್ಲಿಮರಿಗೆ ಅವರೊಳಗಿನ
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಯನ್ನು ಆಧಾರವಾಗಿಟ್ಟುಕೊಂಡು ಮೀಸಲಾತಿ ನೀಡಲಾಗಿದೆಯೇ ಹೊರತು ಅದು ಧರ್ಮಾಧರಿತವಾದುದ್ದಲ್ಲ. ಇದನ್ನು ನಾನು ಹಲವು ಬಾರಿ ವಿಧಾನಮಂಡಲದ ಒಳಗೆ ಮತ್ತು ಹೊರಗೆ ಹೇಳಿದ್ದೇನೆ ಎಂದಿದ್ದಾರೆ.
ಬಿಜೆಪಿಯ ಮಿತ್ರ ಪಕ್ಷವಾದ ತೆಲುಗುದೇಶಂ ಪಕ್ಷದ ನಾಯಕರು ಮತ್ತು ಆಂದ್ರಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರೇ ಬಹಿರಂಗವಾಗಿ ಮುಸ್ಲಿಂ ಮೀಸಲಾತಿಯನ್ನು ಬೆಂಬಲಿಸುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಪ್ರಾಯ ಏನು ಎನ್ನುವುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಸ್ಲಿಂಮರಲ್ಲಿನ ಹಿಂದುಳಿಯುವಿಕೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಸನ್ಮಾನ್ಯ ನರೇಂದ್ರ ಮೋದಿ ಅವರು ತಿಳಿದುಕೊಳ್ಳಲು ಬಯಸುವುದಾದರೆ ಈ ಬಗ್ಗೆಯೇ ಅಧ್ಯಯನ ಮಾಡಿರುವ ಸಾಚಾರ್ ಸಮಿತಿಯ ವರದಿಯನ್ನು ಪರಿಶೀಲಿಸುವ ಕಷ್ಟ ತೆಗೆದುಕೊಳ್ಳಬೇಕು. ಆ ವರದಿಯ ಪ್ರಕಾರ ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರಗಳಲ್ಲಿ ಮುಸ್ಲಿಂಮರ ಪ್ರಾತಿನಿಧ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಿಂತಲೂ ಕಡಿಮೆ ಇದೆ ಎಂದು ತಿಳಿಸಿದ್ದಾರೆ.