SUDDIKSHANA KANNADA NEWS/ DAVANAGERE/ DATE:17-11-2024
ದಾವಣಗೆರೆ: ರೈತರ, ಜನಸಾಮಾನ್ಯರ, ಮಠ ಮಂದಿರಗಳ, ಕೆಲವು ಕಡೆ ಶ್ರೀ ಬೀರೇಶ್ವರ ದೇವಸ್ಥಾನ ಸೇರಿದಂತೆ ದೇವರ ಗುಡಿ ಗುಂಡಾರಗಳ ಆಸ್ತಿಗಳ ದಾಖಲೆಗಳಲ್ಲಿ ವಕ್ಫ್ ಆಸ್ತಿಯೆಂದು ನಮೂದಿಸಿ ನೋಟಿಸ್ ನೀಡಿದ್ದು ಹಗಲು ದರೋಡೆಯ ಪ್ರಯತ್ನವಾಗಿದೆ. ಮುಟೇಷನ್ ನಲ್ಲಿ ಒಂದಾಕ್ಷರವನ್ನು ತೆಗೆಯದಿಲ್ಲ ಮತ್ತು ವಕ್ಫ್ ಎಂದು ದಾಖಲಾಗಿರುವುದನ್ನು ರದ್ದುಪಡಿಸಿಲ್ಲ. ಆದರೆ ರಾಜ್ಯ ಸರಕಾರ ಇದಕ್ಕೆ ಸಂಬಂಧಿಸಿದ ನೋಟಿಸ್ ಹಿಂಪಡೆಯುವುದಾಗಿ ಹೇಳಿರುವುದು ಜನರ ಕಣ್ಣೊರೆಸುವ ಕುತಂತ್ರ ಎಂದು ಜಿಲ್ಲಾ ಬಿಜೆಪಿ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ಎನ್. ನಾಗಪ್ಪ ಅವರು, ದಾವಣಗೆರೆ ನಗರದ ಪಿ.ಜೆ ಬಡಾವಣೆಯ 4 ಎಕ್ರೆ 13 ಗುಂಟೆ ಜಾಗವನ್ನು ಸ್ಥಳೀಯ ನಾಗರಿಕರ ಗಮನಕ್ಕೂ ಬಾರದೆ, ವಕ್ಫ್ ಮಂಡಳಿ ಆಸ್ತಿ ಎಂದು ಪಹಣಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಇದು ವ್ಯವಸ್ಥಿತವಾಗಿ ಆಸ್ತಿ ಕಬಳಿಸುವ ಹುನ್ನಾರ ಎಂದು ಆರೋಪಿಸಿದರು.
ಸರ್ಕಾರವೇ ಅಭಿವೃದ್ಧಿಪಡಿಸಿರುವ ಮತ್ತು ಇಲ್ಲಿನ ಜನರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಕೊಂಡಿರುವ ಸದರಿ ಪಿ.ಜೆ ಬಡಾವಣೆಯ ಆಸ್ತಿಯ ದಾಖಲೆಗಳಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಾಗಿರುವುದರಿಂದ ಮಾರಾಟ ಅಥವಾ ಪರಭಾರೆ ಮಾಡಲು ಬರುವುದಿಲ್ಲ. ಬ್ಯಾಂಕ್ ನವರು ಇನ್ನು ಮುಂದಿನ 20 ರಿಂದ 25 ವರ್ಷಗಳವರೆಗೆ ಸಾಲ ಕೊಡುವುದಿಲ್ಲ. ಇದನ್ನು ಪ್ರಶ್ನಿಸಿದ್ರೆ ಬಿಜೆಪಿ ರಾಜಕೀಯ ಮಾಡುತ್ತಿದೆ. ಸುಖಾಸುಮ್ಮನೆ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಕಾಂಗ್ರೆಸ್ ನವರಿಗೆ ಜನರ ಬಗ್ಗೆ ನಿಜವಾದ ಕಳಕಳಿ ಇದ್ದರೆ, ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಪಹಣಿ-ಮುಟೇಷನ್ ಮತ್ತಿತರ ಸರ್ಕಾರದ ದಾಖಲೆಗಳಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಾಗಿರುವುದನ್ನು ರದ್ದುಪಡಿಸಿ ನಿರ್ಣಯಿಸಬೇಕು ಎಂದು ಒತ್ತಾಯಿಸಿದರು.
ಕೇವಲ ನೋಟಿಸ್ ಹಿಂಪಡೆಯುವುದಾಗಿ ನೀಡಿರುವ ಹೇಳಿಕೆ ಕಣ್ಣೊರೆಸುವ ತಂತ್ರವಾಗಿದೆ. ಸ್ಥಳೀಯ ಶಾಸಕರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರಿಗೆ ಜನಪರ ಕಾಳಜಿ ಇದ್ದಿದ್ದರೆ ಅವರೇ ಸ್ವತಃ ಖುದ್ದು ಸಭೆ ನಡೆಸಿ, ನೊಂದ ಜನರ ಅಹವಾಲು ಸ್ವೀಕಾರ ಮಾಡಬಹುದಾಗಿತ್ತು. ಆದರೆ ತಮ್ಮ ಹಿಂಬಾಲಕರ ಮೂಲಕ ನಿನ್ನೆ ನಗರದ ವಿವಾದಿತ ಪಿ.ಜೆ ಬಡಾವಣೆಯ ಶ್ರೀ ರಾಮ ದೇವಸ್ಥಾನದ ಆವರಣದಲ್ಲಿ ಸಭೆ ನಡೆಸಿದ್ದಾರೆ. ಆದರೆ ಸಭೆಯಲ್ಲಿ ಭಾಗವಹಿಸಿದ್ದ ಸ್ಥಳೀಯ ನಾಗರಿಕರ ಆಕ್ರೋಶವನ್ನು ಎದುರಿಸಲಾಗದೆ ವಿವಾದಿತ ಪ್ರಕರಣಕ್ಕೆ ತಹಸೀಲ್ದಾರ್ ಎಂ.ಬಿ.ಅಶ್ವಥ್ ರವರಿಂದ ಇಲ್ಲ ಸಲ್ಲದ ಸಮಜಾಯಿಸಿ ಕೊಡಲು ಪ್ರಯತ್ನಿಸಿದ್ದಾರೆ ಎಂದು ಹೇಳಿದರು.
ಸಾರ್ವಜನಿಕರ ಅಸಮಾಧಾನ ತಣ್ಣಿಸಲು ಅವರಿಂದ ಸಾಧ್ಯವಾಗಿಲ್ಲ. ದೂಡ ಅಧ್ಯಕ್ಷ ದಿನೇಶ್ ಶೆಟ್ಟಿ ಮುಂತಾದವರು ಈ ವಿವಾದಕ್ಕೆ ಮತ್ತು ಗೊಂದಲಕ್ಕೆ ಬಿಜೆಪಿ ನೇರ ಕಾರಣ ಎಂದು ಹೇಳುತ್ತಾರೆ. ಇದು ಹಾಸ್ಯಾಸ್ಪದ. ಈ ಹೇಳಿಕೆಯನ್ನು ಕೇಳಿದ ದಾವಣಗೆರೆ ನಗರದ ಸಣ್ಣ ಮಗು ಕೂಡ ನಗುತ್ತದೆ. ಆದರೆ ಹೇಗೆ ಬಿಜೆಪಿ ಕಾರಣ ಎಂಬುದನ್ನು ದಾಖಲೆ ಸಮೇತ ಸಾಬೀತುಪಡಿಸಬೇಕು. ಇಲ್ಲವಾದರೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ಸಿಗರು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರರನ್ನು ಟೀಕಿಸುವ ದುಸ್ಸಾಹಸ ಮಾಡಿದ್ದಾರೆ. ದೊಡ್ಡವರನ್ನು ಟೀಕಿಸಿದ ಮಾತ್ರಕ್ಕೆ ತಾವು ದೊಡ್ಡವರಾಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಧಿಕಾರದ ಹಂಬಲಕ್ಕಾಗಿ ತಮ್ಮ ಪಕ್ಷದ ನಾಯಕರನ್ನು ಓಲೈಸುವ ಆತುರದಲ್ಲಿ ಎಡವಬಾರದು ಎಂಬ ಕಿವಿಮಾತು ಹೇಳಬಯಸುತ್ತೇವೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಕೊಳೇನಹಳ್ಳಿ ಸತೀಶ್, ಜಿಲ್ಲಾ ಮಾಧ್ಯಮ ವಕ್ತಾರ ಹೆಚ್. ಪಿ. ವಿಶ್ವಾಸ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.