SUDDIKSHANA KANNADA NEWS/ DAVANAGERE/ DATE:27-02-2025
ದಾವಣಗೆರೆ: ನಮನ ಅಕಾಡೆಮಿಯು ಸತತ ಐದು ವರ್ಷಗಳಿಂದ ಆಯೋಜಿಸುತ್ತಿರುವ “ಶಿವ ಸ್ಮರಣೆ ನೃತ್ಯ ಜಾಗರಣೆ” ಕಾರ್ಯಕ್ರಮವು ಈ ವರ್ಷವೂ ವಿಜೃಂಭಣೆಯಿಂದ ನಡೆಯಿತು. ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೂ ಸತತವಾಗಿ ದಾವಣಗೆರೆಯ ನಾಲ್ಕು ಹೆಸರಾಂತ ದೇವಾಲಯಗಳಲ್ಲಿ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆ ನಗರದ ರಿಂಗ್ ರಸ್ತೆಯ ಶಾರದಾ ಮಂದಿರದಲ್ಲಿ ನೆರವೇರಿತು.
ನೃತ್ಯ ಜಾಗರಣೆಯ ವೈಶಿಷ್ಟ್ಯತೆ:
ಈ ವರ್ಷದ ನೃತ್ಯ ಜಾಗರಣೆಯು ರಾತ್ರಿ 9.30ಕ್ಕೆ ಶಾರದಾ ಮಂದಿರದಲ್ಲಿ ಪ್ರಾರಂಭವಾಗಿ ನಂತರ ಲಿಂಗೇಶ್ವರ ದೇವಸ್ಥಾನದಲ್ಲಿ ತದನಂತರ ಕೂಡಲಿ ಶಂಕರ ಮಠದಲ್ಲಿ ಅಂತಿಮವಾಗಿ ವಿದ್ಯಾನಗರದ ಶಿವ ಪಾರ್ವತಿ ದೇವಸ್ಥಾನದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ ಪ್ರಥಮ ನೃತ್ಯ ಗಣೇಶ ಸ್ತುತಿಯಲ್ಲಿ ಗಣೇಶನ ಮಹಿಮೆ ಹಾಗೂ ಎಲ್ಲಾ ದೇವತೆಗಳಿಂದ ಅವನ ಆರಾಧನೆಯನ್ನು ಈ ನೃತ್ಯ ರೂಪದಲ್ಲಿ ತೋರಿಸಲಾಯಿತು.
ಈ ಐದನೇ ವರ್ಷದ ನೃತ್ಯ ಜಾಗರಣೆಗೆ ವಿಶೇಷವಾಗಿ ಸಂಯೋಜಿಸಲಾದ 14 ನಿಮಿಷಗಳ ವರ್ಣಂ, ಭರತನಾಟ್ಯ ಮಾರ್ಗಂನ ಪ್ರಮುಖ ಹಂತವಾಗಿದ್ದು, ಗಂಗಾ ವರ್ಣಂ ಗಂಗೆಯ ಪವಿತ್ರತೆ, ವಾಮನ ಅವತಾರದ ಸಂದರ್ಭದಲ್ಲಿನ ಗಂಗೆಯ ಉದ್ಭವ ಹಾಗೂ ಸಗರ ರಾಜನ 60,000 ಪುತ್ರರ ವಿಮೋಚನೆಗೆ ಗಂಗೆಯ ಉದ್ಭವಕ್ಕೆ ಸಂಬಂಧಿಸಿದ ಪ್ರಸಂಗಗಳನ್ನು ನೃತ್ಯ ರೂಪದಲ್ಲಿ ಪ್ರದರ್ಶಿಸಲಾಯಿತು. ಈ ವಿಶೇಷ ಪ್ರಸ್ತುತಿಯು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕಪಾಲಿನಿ ನೃತ್ಯದಲ್ಲಿ ಶಿವನ ರೌದ್ರಾವತಾರ, ವಿಷಪಾನ ಹಾಗೂ ಮಾರ್ಕಂಡೇಯನ ಭಕ್ತಿಗೆ ಮೆಚ್ಚಿ ಅವನಿಗೆ ಶಿವನ ಆಶೀರ್ವಾದ ದೊರಕುವ ದೃಶ್ಯಗಳನ್ನು ಅಭಿನಯಿಸಲಾಯಿತು. ಅರ್ಧನಾರೀಶ್ವರ ಪ್ರಸ್ತುತಿಯಲ್ಲಿ ಶಿವ-ಪಾರ್ವತಿಯ ಸಮತ್ವವನ್ನು ಪ್ರತಿಪಾದಿಸುವ ಅರ್ಧನಾರೀಶ್ವರ ನೃತ್ಯಬಂಧ ಪ್ರಸ್ತುತವಾಯಿತು.
“ಶಿವ ಸ್ಮರಣೆ ನೃತ್ಯ ಜಾಗರಣೆ” ಕಾರ್ಯಕ್ರಮವು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದು, ಸಂಭ್ರಮದಿಂದ ನೆರವೇರಿತು. ಈ ಎಲ್ಲ ನೃತ್ಯ ಪ್ರಸ್ತುತಿಗಳನ್ನು ನಮನ ಅಕಾಡೆಮಿಯ 10 ವಿದ್ಯಾರ್ಥಿಗಳು ಹಾಗೂ ಅವರ ಗುರು ವಿದುಷಿ ಶ್ರೀಮತಿ ಮಾಧವಿ ಡಿ. ಕೆ. ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಯಿತು.
ಉದ್ಘಾಟನಾ ಸಮಾರಂಭವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಬಿ, ಶಂಕರ ಸೇವಾ ಸಂಘದ ಅಧ್ಯಕ್ಷ ಡಾ. ಬಿ. ಟಿ. ಅಚ್ಯುತ ಹಾಗೂ ವೇದಬ್ರಹ್ಮ ಶ್ರೀ ಶಂಕರನಾರಾಯಣ ಶಾಸ್ತ್ರಿಗಳು ನೆರವೇರಿಸಿದರು.
ಉದ್ಘಾಟನಾ ಭಾಷಣದಲ್ಲಿ ಡಾ. ಬಿ. ಟಿ. ಅಚ್ಯುತ ಅವರು ನಮನ ಅಕಾಡೆಮಿಯ ಗುರುಗಳು ಹಾಗೂ ವಿದ್ಯಾರ್ಥಿಗಳು ನಿರಂತರವಾಗಿ ಶಿವರಾತ್ರಿಯಂದು ವಿಶೇಷ ಶಾಸ್ತ್ರೀಯ ನೃತ್ಯ ಕಾರ್ಯಕ್ರಮವನ್ನು ಪ್ರದರ್ಶಿಸುತ್ತಿರುವುದನ್ನು ಶ್ಲಾಘಿಸಿದರು.
“ಶಿವನ ಕುರಿತಾದ ಶಾಸ್ತ್ರೀಯ ಹಾಡುಗಳಿಗೆ ಶಾಸ್ತ್ರೀಯ ನೃತ್ಯವನ್ನು ಸಂಯೋಜಿಸಿ, ನಮ್ಮ ಭಾರತೀಯ ಸಂಸ್ಕೃತಿಯನ್ನು ಪೋಷಿಸಿ, ಬೆಳೆಸುವ ಕಾರ್ಯವನ್ನು ನಮನ ಅಕಾಡೆಮಿ ಮಾಡುತ್ತಿದೆ. ಶ್ರೀ ಶಾರದಾಂಬೆಯ ಆಶೀರ್ವಾದದಿಂದ ಈ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಮಟ್ಟಕ್ಕೆ ಬೆಳೆಯಲಿ,” ಎಂದು ಆಶಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಬಿ. ಅವರು ನಮನ ಅಕಾಡೆಮಿಯ ವೈಶಿಷ್ಟ್ಯವನ್ನು ಮೆಚ್ಚಿ, “ನಾನು ಈ ಅಕಾಡೆಮಿಯ ಅನೇಕ ಕಾರ್ಯಕ್ರಮಗಳನ್ನು ನೋಡಿದ್ದೇನೆ. ಪ್ರತಿಯೊಂದು ಕಾರ್ಯಕ್ರಮವೂ ವಿಭಿನ್ನವಾಗಿದ್ದು, ಶ್ರಮ ಹಾಗೂ ಅಭ್ಯಾಸದ ಫಲವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬರುತ್ತಿದ್ದಾರೆ, ನಮ್ಮ ಇಲಾಖೆಯ ಸಹಕಾರ ಸದಾ ಅವರಿಗೆ ಇರುತ್ತದೆ,” ಎಂದು ತಿಳಿಸಿದರು.
ಅಕಾಡೆಮಿಯ ಅಧ್ಯಕ್ಷ ಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ನಿರ್ದೇಶಕ ಅನಿಲ್ ಬಾರಂಗಳ್ ಸ್ವಾಗತಿಸಿದರು. ನಿರ್ದೇಶಕ ರಾಮನಾಥ್ ಪಿ. ಸಿ. ವಂದಿಸಿದರು. ನೃತ್ಯ ಪ್ರಸ್ತುತಿಗಳ ನಿರೂಪಣೆಯನ್ನು ಕುಮಾರಿ ಯುಕ್ತ ಎಸ್. ಕಟಾರೆ ಮನೋಜ್ಞವಾಗಿ ನಡೆಸಿಕೊಟ್ಟರು.