SUDDIKSHANA KANNADA NEWS/ DAVANAGERE/ DATE:17-12-2024
ಬೆಳಗಾವಿ: ನನ್ನ ಮೇಲೆ, ನಮ್ಮ ಸರ್ಕಾರದ ಮೇಲೆ ಮಾಡಿದ ಸರಣಿ ಸುಳ್ಳು ಆರೋಪ, ಅಪಪ್ರಚಾರ ಮಾಡಿದರೂ ಅದೆಲ್ಲವನ್ನೂ ತಿರಸ್ಕರಿಸಿ ರಾಜ್ಯದ ಜನತೆ ನಮ್ಮ ಕೈ ಹಿಡಿದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ನಾವು ಹಾಸನದಲ್ಲಿ ನಾವು ಮಾಡಿದ ಸ್ವಾಭಿಮಾನಿ ಸಮಾವೇಷ ಐತಿಹಾಸಿಕವಾದದು. ಆದ್ದರಿಂದ ರಾಜ್ಯದ ಜನತೆ ಈಗಲೂ ನಮ್ಮ ಪರವಾಗಿದ್ದಾರೆ. ನಾಳೆಯೂ ನಮ್ಮ ಪರವಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ನಮ್ಮ ಪರವಾಗಿರುತ್ತಾರೆ ಎಂದರು.
ರೋಣದಲ್ಲಿ 200 ಕೋಟಿ, ಹೆಚ್.ಡಿ.ಕೋಟೆಯಲ್ಲಿ ನೂರಾರು ಕೋಟಿ, ತುಮಕೂರಿನಲ್ಲಿ 1700 ಕೋಟಿ ರೂಪಾಯಿಯ ಅಭಿವೃದ್ಧಿ ಕೆಲಸಗಳನ್ನು ನಾವೇ ಉದ್ಘಾಟಿಸಿದ್ದೀವಿ. ಇವು ಉದಾಹರಣೆಗಳಷ್ಟೆ. ಪ್ರತೀ ಜಿಲ್ಲೆ, ಪ್ರತೀ ತಾಲ್ಲೂಕುಗಳಲ್ಲೂ ನೂರಾರು ಕೋಟಿಯ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ಉದ್ಘಾಟನೆ ಆಗುತ್ತಲೇ ಇವೆ. ಬಜೆಟ್ಟಿನಲ್ಲಿ 120000 ಕೋಟಿ ಅಭಿವೃದ್ಧಿ ಹಣ ತೆಗೆದಿಡಲಾಗಿದೆ. ಕೆಲಸಗಳು ನಿರಂತರವಾಗಿ ನಡೆಯುತ್ತಲೇ ಇವೆ. 52009 ಕೋಟಿ ರೂಪಾಯಿ ಗ್ಯಾರಂಟಿಗಳ ಮೂಲಕ ಜನರ ಜೇಬಿಗೆ, ಜನರ ಖಾತೆಗೆ ನೇರವಾಗಿ ಜಮೆ ಆಗುತ್ತಿದೆ. ಹೀಗಾಗಿ ಅಭಿವೃದ್ಧಿ ಪರ್ವ ರಾಜ್ಯದಲ್ಲಿ ನಿರಂತರತೆ ಕಾಯ್ದುಕೊಂಡಿದೆ ಎಂದು ತಿಳಿಸಿದರು.
ನಮ್ಮ ಶಾಸಕರು, ವಿಧಾನ ಪರಿಷತ್ ಸದಸ್ಯರು ಈ ಸತ್ಯವನ್ನು, ಸತ್ಯದ ಅಂಕಿ ಅಂಶಗಳನ್ನು ಜನರ ಮುಂದಿಟ್ಟು ತೋರಿಸಿದರೂ ಸಾಕು. ಸತ್ಯವನ್ನು ಮನೆ ಮನೆ ತಲುಪಿಸಿ ಎಂದು ಕರೆ ನೀಡಿದರು.