SUDDIKSHANA KANNADA NEWS/ DAVANAGERE/ DATE:03-03-2025
ದಾವಣಗೆರೆ: ದಾವಣಗೆರೆ ಜಿಲ್ಲೆಯಾದ್ಯಂತ ಹಾಫ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಧರಿಸಿದರೆ ದಂಡ ಫಿಕ್ಸ್ ಖಚಿತ. ಇಂದಿನಿಂದ ಉತ್ತಮ ಗುಣಮಟ್ಟದ ಫುಲ್ ಹೆಲ್ಮೆಟ್ ಧರಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಎಚ್ಚರಿಕೆ ನೀಡಿದ್ದಾರೆ.
ಮಾರ್ಚ್ 3ರ ಸೋಮವಾರದಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಉತ್ತಮ ಗುಣಮಟ್ಟದ ಫುಲ್ ಹೆಲ್ಮೆಟ್ ಗಳನ್ನು ಧರಿಸಬೇಕು. ಉತ್ತಮ ಗುಣಮಟ್ಟ ಇಲ್ಲದ ಕಳಪೆ ಹಾಗೂ ಹಾಫ್, ಪ್ಲಾಸ್ಟಿಕ್ ಹೆಲ್ಮೆಟ್ ಹಾಕಿಕೊಂಡು ಮೋಟಾರ್ ಸೈಕಲ್ ಓಡಿಸುವ ಚಾಲಕರಿಗೆ ಕಡ್ಡಾಯವಾಗಿ ದಂಡ ವಿಧಿಸಲಾಗುವುದು ಎಂದು ಪೊಲೀಸ್ ಅಧಿಕ್ಷಕಿ ಉಮಾ ಪ್ರಶಾಂತ್ ಹೇಳಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಪೂರ್ಣ ಪ್ರಮಾಣ ಹೆಲ್ಮೆಟ್ ಧರಿಸಲು ಅರಿವು ಮೂಡಿಸಲಾಯಿತು. ಕಳೆದ ಹತ್ತು ದಿನಗಳಿಂದಲೂ ಹಾಫ್ ಹೆಲ್ಮೆಟ್ ವಶಕ್ಕೆ ಪಡೆಯುವ ಆಪರೇಷನ್ ನಡೆಸಲಾಯಿತು. ಈ ಮಧ್ಯೆ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಎ. ನಾಗರಾಜ್ ಸೇರಿದಂತೆ ಕೆಲವರು ಬೇಸಿಗೆ ಕಾಲ ಮುಗಿಯುವವರೆಗೆ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸಲು ವಿನಾಯಿತಿ ನೀಡಬೇಕೆಂದು ಸಭೆ ನಡೆಸಿದ್ದರು. ಆದ್ರೆ, ಈ ಸಭೆಗೆ ಎಸ್ಪಿ ಉಮಾ ಪ್ರಶಾಂತ್ ಅವರು ಹೆಚ್ಚಿನ ಮಹತ್ವ ನೀಡಿಲ್ಲ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದು ಜನರ ಪ್ರಶಂಸೆಗೂ ಪಾತ್ರವಾಗಿದೆ.
ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯ ಕುಮಾರ ಎಂ. ಸಂತೋಷ್, ಜಿ. ಮಂಜುನಾಥ , ನಗರ ಡಿವೈಎಸ್ಪಿ ಶರಣ ಬಸವೇಶ್ವರ ಅವರ ಮಾರ್ಗದರ್ಶನದಲ್ಲಿ ದಾವಣಗೆರೆ ನಗರ ಸಂಚಾರ ಪೊಲೀಸ್ ಸಿಪಿಐ ನಲವಾಗಲು ಮಂಜುನಾಥ್ ನೇತೃತ್ವದಲ್ಲಿ ದಕ್ಷಿಣ ಸಂಚಾರ ಮತ್ತು ಉತ್ತರ ಸಂಚಾರ ಪಿಎಸ್ಐಗಳಾದ ಜಯಶೀಲ, ನಿರ್ಮಲ, ಶೈಲಜಾ, ಮಂಜಪ್ಪ ಹಾಗೂ ಸಿಬ್ಬಂದಿಗಳ ತಂಡವು ಅರಿವು ಮೂಡಿಸಿತ್ತು.
ದಾವಣಗೆರೆ ನಗರದಲ್ಲಿ ಹಾಫ್ ಹೆಲ್ಮೆಟ್, ಕಳಪೆ ಗುಣಮಟ್ಟದ ಹೆಲ್ಮೆಟ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಹಾಕಿಕೊಂಡು ಸಂಚಾರಿಸುವ ಮೋಟಾರ್ ಸೈಕಲ್ ಚಾಲಕರಿಗೆ ಸುರಕ್ಷಿತಾ ದೃಷ್ಟಿಯಿಂದ ಅವುಗಳನ್ನು ಧರಿಸದಂತೆ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ /ಹಾಫ್ ಹೆಲ್ಮೆಟ್ ಬದಲಾಗಿ ಐಎಸ್ ಐ ಗುಣಮಟ್ಟದ ಸುರಕ್ಷತಾ ಹೆಲ್ಮೆಟ್ ಗಳನ್ನು ಧರಿಸಿ ಮೋಟಾರ್ ಸೈಕಲ್ ಚಲಾಯಿಸಿ ಅಪಘಾತದಂತ ಸಂದರ್ಭದಲ್ಲಿ ತಮ್ಮ ಜೀವನ ಹಾನಿಯನ್ನು ತಡೆಯಬೇಕು ಎಂದು ಅರಿವು ಮೂಡಿಸಿದ್ದರು. ಜೊತೆಗೆ ಜನರಿಗೆ ಎಚ್ಚರಿಕೆಯನ್ನೂ ನೀಡಿದ್ದರು.