SUDDIKSHANA KANNADA NEWS/ DAVANAGERE/ DATE:24-10-2024
ದಾವಣಗೆರೆ: ರಸ್ತೆ, ಚರಂಡಿಯಲ್ಲಿ ರಾತ್ರಿ ವೇಳೆ ಕಸ ಹಾಕ್ತೀರಾ. ಬೆಳಿಗ್ಗೆ ಕಸ ಹಾಕಿ ಹೋದರೆ ಮುಗಿಯಿತು, ಯಾರು ಏನು ಮಾಡಲ್ಲ ಎಂಬ ನಿರ್ಭೀತಿಯಿಂದ ಮನೆಗೆ ವಾಪಸ್ ಹೋಗುತ್ತೀರಾ. ಮನೆ ಮುಂದೆ ಬರುವ ಕಸದ ವಾಹನಗಳಿಗೆ ಕಸ ಹಾಕದೇ, ಬೈಕ್ ಗಳಲ್ಲಿ, ವಾಕಿಂಗ್ ನೆಪದಲ್ಲಿ ಕಸ ಹಾಕಲು ಹೋದರೆ ದಂಡ ಬೀಳೋದು ಗ್ಯಾರಂಟಿ. ಮಾತ್ರವಲ್ಲ, ಮಾರ್ಷಲ್ ಗಳು ಬರುತ್ತಾರೆ. ಸರಿಯಾದ ಪಾಠ ಕಲಿಸ್ತಾರೆ.
ಹೌದು. ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ತಕ್ಕ ಪಾಠ ಕಲಿಸಲು ದಾವಣಗೆರೆ ಮಹಾನಗರ ಪಾಲಿಕೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಕಸ ಹಾಕುವುದನ್ನು ತಡೆಯುವ ಸಲುವಾಗಿ 20 ಮಾರ್ಷಲ್ ಗಳ ನೇಮಕಕ್ಕೆ ಮಹಾನಗರ ಪಾಲಿಕೆಯು ತೀರ್ಮಾನಿಸಿದೆ. ನಿವೃತ್ತ ಯೋಧರನ್ನು ನೇಮಿಸಿ ಕಸ ಹಾಕುವವರಿಗೆ ದಂಡ ವಿಧಿಸುವ ಅಧಿಕಾರ ನೀಡುವ ಕುರಿತಂತೆ ಚರ್ಚಿಸಲಾಗಿದೆ. ಹೆಲ್ತ್ ಇನ್ ಸ್ಪೆಕ್ಟರ್ ಗಳಿಗೆ ದಂಡ ಹಾಕುವ ಅಧಿಕಾರ ಇದೆ. ಮಾರ್ಷಲ್ ಗಳಿಗೂ ಈ ಅಧಿಕಾರ ನೀಡಲಾಗುತ್ತದೆ.
ಮಾರ್ಷಲ್ ಗಳ ನೇಮಕ ಆದಷ್ಟು ಬೇಗ ಆಗುವುದು ಸುಲಭವಲ್ಲ. ಯಾಕೆಂದರೆ ಕಾರ್ಮಿಕ ಇಲಾಖೆಯ ಕಾಯ್ದೆ ಪ್ರಕಾರ ಅವರಿಗೆ ತಕ್ಕ ವೇತನ, ಪಿಎಫ್, ಇಎಸ್ಐ ಸೇರಿದಂತೆ ಯಾವೆಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂಬ ಕುರಿತಂತೆ ಚರ್ಚಿಸಲಾಗುವುದು. ಈ ಬಳಿಕ ಮಾರ್ಷಲ್ ಗಳ ನೇಮಕ ಪ್ರಕ್ರಿಯೆ ವೇಗ ಪಡೆದುಕೊಳ್ಳಲಿದೆ.
ಈಗಾಗಲೇ ರಸ್ತೆ, ಚರಂಡಿ ಸೇರಿದಂತೆ ಎಲ್ಲೆಂದರಲ್ಲಿ ಕಸ ಬಿಸಾಡದಂತೆ ಮನವಿ ಮಾಡಲಾಗಿದೆ. ಆದರೂ ಸಾರ್ವಜನಿಕರು ಕೇಳುತ್ತಿಲ್ಲ. ರಾತ್ರಿ ವೇಳೆ, ಹಗಲಿನ ಹೊತ್ತು ಯಾರು ಇಲ್ಲವೆಂದುಕೊಂಡು ಕಸ ಎಸೆದು ಹೋಗುವ ಘಟನೆಗಳು ವರದಿಯಾಗುತ್ತಲೇ ಇವೆ. ಈ ಕಾರಣದಿಂದ ಮಾರ್ಷಲ್ ಗಳ ನೇಮಕ ಮಾಡಿಕೊಳ್ಳಲಾಗುವುದು. ಬೈಕ್ ನಲ್ಲಿ ಬಂದು ಕಸ ಹಾಕುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸುತ್ತಾರೆ. ಅಧಿಕಾರಿಗಳೂ ಈ ಕೆಲಸ ಮುತುವರ್ಜಿ ವಹಿಸಿ ಮಾಡುವಂತೆ ಸೂಚನೆ ನೀಡಲಾಗುವುದು.
ಕಸ ಎಸೆಯುವಾಗ ಮೊದಲನೇ ಬಾರಿ ಸಿಕ್ಕಿ ಬಿದ್ದರೆ ಸ್ಥಳದಲ್ಲಿಯೇ 500 ರೂಪಾಯಿ ದಂಡ, ಎರಡನೇ ಬಾರಿ ಸಿಕ್ಕಿಬಿದ್ದಾಗ 1000 ರೂ. ದಂಡ ಹಾಗೂ ಮೂರನೇ ಬಾರಿ ಸಿಕ್ಕಿಬಿದ್ದರೆ 2 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಮೇಯರ್ ಕೆ. ಚಮನ್ ಸಾಬ್ ತಿಳಿಸಿದರು.
ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತಾವೇ ಸ್ವಚ್ಛಗೊಳಿಸಬೇಕು. ತಪ್ಪಿದ್ದಲ್ಲಿ ಮಹಾನಗರ ಪಾಲಿಕೆಯಿಂದ ದಂಡ ವಿಧಿಸಲಾಗುವುದು. ಪಾಲಿಕೆಯ ಮುಖ್ಯ ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ಅನ್ನು ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.