SUDDIKSHANA KANNADA NEWS/ DAVANAGERE/ DATE:24-03-2024
ದಾವಣಗೆರೆ: ಭದ್ರಾ ಡ್ಯಾಂನಿಂದ ನೀರು ಹರಿಸಲು ಪ್ರಾರಂಭಿಸಿ ಇಂದಿಗೆ 4 ದಿನಗಳಾದರೂ ಕಾಲುವೆಗಳಲ್ಲಿ ನೀರು ಬರದಿರುವುದನ್ನು ಖಂಡಿಸಿ ರೈತರು ಕುಂದುವಾಡದ ಬಳಿ ಕಾಲುವೆಗೆ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಬೆಳಿಗ್ಗೆ ರೈತರು ಕುಂದುವಾಡದ ಬಳಿ ಕಾಲುವೆಗೆ ಇಳಿದು ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸಿಟ್ಟು ಹೊರ ಹಾಕಿದರು.
ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ)ಯು ಅವೈಜ್ಞಾನಿಕ ವೇಳಾಪಟ್ಟಿಯಿಂದ ನೀರು ಕಾಲುವೆಗಳಲ್ಲಿ ನೀರು ಬಂದಿಲ್ಲ. ಐಸಿಸಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನರವರು ಭಾಗವಹಿಸಿ ದಾವಣಗೆರೆ ಜಿಲ್ಲೆಯಲ್ಲಿ ಶೇಕಡ 70 ರಷ್ಟು ಅಚ್ಚುಕಟ್ಟು ಪ್ರದೇಶ ಇದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕು ಎಂದು ಅಂಕಿ ಅಂಶಗಳ ಸಹಿತ ವಾದ ಮಂಡಿಸಿ, ನೀರು ಬಿಡಿಸುವ ಪ್ರಮಾಣ ಮತ್ತು ಅವಧಿ ಲೆಕ್ಕಾಚಾರದಂತೆ ವೇಳಾಪಟ್ಟಿ ನಿಗಧಿ ಮಾಡಿಸಬೇಕಾಗಿತ್ತು. ಆದರೆ ಅವರು ನಿರ್ಲಕ್ಷ್ಯ ಮತ್ತು ರೈತ ವಿರೋಧಿ ಧೋರಣೆಯಿಂದ ಐಸಿಸಿ ಸಭೆಗೆ ಗೈರು ಹಾಜರಾಗಿ, ಜಿಲ್ಲೆಯಲ್ಲಿ ನೀರಿನ ಹಾಹಾಕಾರಕ್ಕೆ ಕಾರಣಕರ್ತರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸುಮಾರು ಹತ್ತಿಪ್ಪತ್ತು ವರ್ಷಗಳಿಂದ ಕಷ್ಟಪಟ್ಟು ಬೆವರು ಸುರಿಸಿ, ತೋಟದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ನಾವು ರೈತರು ಅನ್ನ ಕೊಡುವವರು ಕನ್ನ ಹಾಕುವವರಲ್ಲ. ಸರ್ಕಾರ ನೀರಿಲ್ಲದೆ ಕಂಗಾಲಾಗಿರುವ ನಮ್ಮ ಸಂಕಷ್ಟಕ್ಕೆ ಧಾವಿಸಬೇಕು ಎಂದು ಆಗ್ರಹಿಸಿದರು.
ಭದ್ರಾ ನೀರು ಬರದಿರುವುದರಿಂದ ತೋಟಗಳು ಒಣಗಿ ಹೋಗಿವೆ. ಕೊಳವೆಬಾವಿಗಳಲ್ಲಿ ನೀರಿಲ್ಲದೆ ಅಂತರ್ಜಲ ಮಟ್ಟ ಕುಸಿದಿದೆ. ಪಶು ಪಕ್ಷಿಗಳಿಗೂ ನೀರು ಇಲ್ಲದೆ ಹಾಹಾಕಾರ ಎದ್ದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಭದ್ರಾ ನೀರು ಕಾಲುವೆಯಲ್ಲಿ ಬಂದಿಲ್ಲ. ದನಕರುಗಳಿಗೂ ನೀರು ಮೇವು ಇಲ್ಲದೆ ಸಿಕ್ಕ ಸಿಕ್ಕ ರೇಟ್ ಗೆ ಮಾರಾಟ ಮಾಡುತ್ತಿದ್ದೇವೆ. ಜಿಲ್ಲಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರ ದಿವ್ಯ ನಿರ್ಲಕ್ಷ್ಯದಿಂದಾಗಿ ರೈತರು ನೀರಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿ. ಎಂ .ಸತೀಶ್, ರೈತ ಕುಂದುವಾಡದ ಜಿಮ್ಮಿ ಹನುಮಂತಪ್ಪ, ಕುಂದುವಾಡದ ಪುನೀತ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್. ಜಿ. ಗಣೇಶಪ್ಪ ಮತ್ತಿತರರು ಮಾತನಾಡಿದರು. ಕೂಡಲೇ ಭದ್ರಾ ನಾಲೆಯಲ್ಲಿ ನೀರು ಹರಿಸಬೇಕು. ಇಲ್ಲದಿದ್ದರೆ ಹೋರಾಟ ಉಗ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಬೆಳವನೂರು ನಾಗೇಶ್ವರರಾವ್, ಮಹಾನಗರ ಪಾಲಿಕೆ ಮಾಜಿ ಮಾಜಿ ಮೇಯರ್ ಹೆಚ್. ಎನ್. ಗುರುನಾಥ್, ಮುಖಂಡರಾದ ಭಾಸ್ಕರ್ ರೆಡ್ಡಿ, ಅಣ್ಣಪ್ಪ, ಬಿ ಮಹೇಶಪ್ಪ, ಗದಿಗೇಶ ಹಂಚಿನಮನೆ, ತಿಪ್ಪಣ್ಣಹರಿಹರ, ಹೆಚ್. ಎನ್. ಮಹಾಂತೇಶ, ಹೆಚ್. ಎಸ್. ಸೋಮಶೇಖರ, ಕ್ಯಾಂಪ್ ನಾಗೇಶ್ವರರಾವ್, ರಾಮಕೃಷ್ಣಪ್ಪ ಮುಂತಾದವರು ಪಾಲ್ಗೊಂಡಿದ್ದರು.