SUDDIKSHANA KANNADA NEWS/ DAVANAGERE/ DATE:17-12-2024
ದಾವಣಗೆರೆ: ಸ್ವಾಭಿಮಾನಿ ಬಳಗವು ಹೊನ್ನಾಳಿ – ನ್ಯಾಮತಿ ತಾಲೂಕಿನ ಅವಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಡಿಸೆಂಬರ್ 18ರಂದು ಶಿಕ್ಷಣ ಅದಾಲತ್ – ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನ ಹಮ್ಮಿಕೊಂಡಿದೆ.
ಡಿ. 18ರ ಬೆಳಿಗ್ಗೆ 10 ಗಂಟೆಗೆ ಹೊನ್ನಾಳಿ – ನ್ಯಾಮತಿ ತಾಲ್ಲೂಕಿನ ಸೂರಗೊಂಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಿಂದ ಪ್ರಾರಂಭಗೊಳ್ಳಲಿದೆ. ಬಳಿಕ ಹಳೆ ಜೋಗ ಮತ್ತು ಹೊಸ ಜೋಗ, ಚಿನ್ನಿಕಟ್ಟೆ, ಮಾದಾಪುರ, ಕೊಡತಾಳ, ಸವಳಂಗ, ಸೋಗಿಲು, ಚಟ್ನಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಹಂತ, ಹಂತವಾಗಿ ಅವಳಿ ತಾಲ್ಲೂಕುಗಳ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಅಭಿಯಾನ ನಡೆಯಲಿದೆ ಎಂದು ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರುಗಳು ಹಾಗೂ ಗ್ರಾಮಸ್ಥರು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ನಮ್ಮ ಜೊತೆಯಲ್ಲಿದ್ದು ಸಲಹೆ, ಸಹಕಾರ ನೀಡಬೇಕಾಗಿ ಅವರು ಮನವಿ ಮಾಡಿಕೊಂಡಿದ್ದಾರೆ.
ದೇಶದ ಸಮಗ್ರತೆ ಮತ್ತು ಅಭಿವೃದ್ಧಿಗೆ ಶಿಕ್ಷಣವೂ ಬಹು ಮುಖ್ಯ ಪಾತ್ರ ವಹಿಸುತ್ತದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು, ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯವಾಗಿರುತ್ತದೆ. ಸ್ವಾಭಿಮಾನಿ ಬಳಗವು ರಾಜ್ಯಾದ್ಯಂತ ಶಿಕ್ಷಣ ಅದಾಲತ್ ಮೂಲಕ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಮೂಲಭೂತ ಸೌಕರ್ಯಗಳು, ಶಾಲಾ ಕೊಠಡಿ, ಆಟದ ಮೈದಾನ, ಬಿಸಿಯೂಟದ ಯೋಜನೆ, ಶೌಚಾಲಯ, ಭದ್ರತೆ, ಶಿಕ್ಷಣದ ಗುಣಮಟ್ಟಗಳ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು,
ಸಹ ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ವಿದ್ಯಾರ್ಥಿಗಳ ಜೊತೆ ಮುಕ್ತವಾಗಿ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯವನ್ನು ಹೆಚ್ಚಿಸಲು ಕೈಗೊಳ್ಳಬಹುದಾದ ಮಾರ್ಗಗಳು, ಸಲಹೆಗಳನ್ನು ಹಾಗೂ ಶಾಲೆಗಳಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ಸಂವಾದ ಆಯೋಜಿಸಲಾಗಿದೆ ಎಂದು ಜಿ. ಬಿ. ವಿನಯ್ ಕುಮಾರ್ ಅವರು ತಿಳಿಸಿದ್ದಾರೆ.