SUDDIKSHANA KANNADA NEWS/ DAVANAGERE/ DATE:22-10-2024
ದಾವಣಗೆರೆ: ಕೆಂಪು ಸುಂದರಿ ಟೊಮೊಟೊ ಒಂದು ಕೆಜಿಗೆ ನೂರು ರೂಪಾಯಿ ದಾಟುತ್ತಾ? ಇಂಥದ್ದೊಂದು ಪ್ರಶ್ನೆ ಕಾಡಲು ಕಾರಣ ಮಳೆರಾಯನ ಅಟ್ಟಹಾಸ. ಕೊಯ್ಲಿಗೆ ಬಂದಿದ್ದ ಟೊಮೊಟೊ ಈಗ ಜಮೀನಿನಲ್ಲಿ ಕೊಳೆಯುವಂತಾಗಿದೆ. ಇದರಿಂದಾಗಿ ಸದ್ಯಕ್ಕೆ ಒಂದು ಕೆಜಿಗೆ 50 ರೂಪಾಯಿ ದರ ಇದ್ದು, ಇದು ಶತಕ ದಾಟಿದರೂ ಅಚ್ಚರಿ ಇಲ್ಲ ಎಂದು ರೈತರು ಹೇಳುತ್ತಿದ್ದಾರೆ. ಇದು ಗ್ರಾಹಕರಿಗೆ ಜೇಬಿಗೆ ಕತ್ತರಿ ಬೀಳಿಸುವುದು ಖಚಿತ.
ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಸುತ್ತಮುತ್ತ ಈ ಬಾರಿ ನಿರಂತರವಾಗಿ ಸುರಿದ ಮಳೆಯಿಂದ ಟೊಮೆಟೊ ಫಸಲಿಗೆ ಕೊಳೆ ರೋಗ ತಗುಲಿದ್ದು, ಇಳುವರಿ ಕಡಿಮೆಯಾಗಿರುವುದರಿಂದ ರೈತರು ಆತಂಕಗೊಂಡಿದ್ದಾರೆ.
ಒಂದು ಎಕರೆಯಲ್ಲಿ ಟೊಮೆಟೊ ಬೆಳೆಯಲು ಕನಿಷ್ಠ ರೂ. 1 ಲಕ್ಷ ವೆಚ್ಚವಾಗುತ್ತದೆ. ದಿನನಿತ್ಯದ ಈ ತರಕಾರಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಸಾಕಷ್ಟು ಬಂಡವಾಳ ಹಾಕಿ ಬೆಳೆದಿದ್ದೆವು. ಆದರೆ, ಸತತ ಸುರಿಯುತ್ತಿರುವ ಮಳೆಯಿಂದ ಕೊಳೆರೋಗ ತಗುಲಿ ಬೆಳೆ ನಾಶವಾಗುತ್ತಿದೆ. ಇಳುವರಿ ಕಡಿಮೆಯಾಗಿ ಪೂರೈಕೆಯೂ ಇಲ್ಲದೇ 25 ಕೆ.ಜಿ. ತೂಗುವ ಒಂದು ಕ್ರೇಟ್ ಟೊಮೆಟೊ ಬೆಲೆ ಈಗ 800 ರಿಂದ 1000ಕ್ಕೆ ಏರಿಕೆಯಾಗಿದೆ ಎಂದು ಟೊಮೆಟೊ ಬೆಳೆಗಾರರು ಹೇಳುತ್ತಾರೆ.
ಟೊಮೆಟೊ ಮೂರು ತಿಂಗಳ ಬೆಳೆ. ಸಸಿಗಳನ್ನು ನರ್ಸರಿಯಿಂದ ತಂದು ನಾಟಿ ಮಾಡಲಾಗಿತ್ತು. ಗೊಬ್ಬರ ಹಾಕಿ, ಔಷಧ ಸಿಂಪಡಿಸಿ ಚೆನ್ನಾಗಿ ಬೆಳೆದಿದ್ದೆವು. ಆದರೆ, ಮಳೆಯು ಉತ್ತಮ ಆದಾಯದ ನಿರೀಕ್ಷೆಗೆ ತಣ್ಣೀರು ಎರಚಿದೆ.
ಗುತ್ತಿಗೆ ಪಡೆದ ರೈತರ ಪಾಡಂತೂ ಹೇಳತೀರದ್ದು. ಹಾಕಿದ ಅಸಲು ಬರುತ್ತದೆಯೋ ಇಲ್ಲವೋ ಎಂಬ ಭೀತಿಯಲ್ಲಿ ಇದ್ದಾರೆ. .ಟೊಮೆಟೊ ಕೆ.ಜಿ.ಗೆ ರೂ 50 ರಿಂದ ರೂ 60ಕ್ಕೆ ಇದ್ದು, ಕೊಳೆ ರೋಗದಿಂದ ಫಸಲು ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಕೆ.ಜಿ. ಬೆಲೆ ರೂ. 100ರವರೆಗೂ ಏರುವ ಸಾಧ್ಯತೆ ಇದೆ ಎನ್ನುತ್ತಾರೆ ಟೊಮೊಟೊ ವ್ಯಾಪಾರ ಮಾಡುವವರು.