ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು (240) ಸ್ಥಾನಗಳನ್ನು ಗೆದ್ದಿದೆ. ಆದರೆ ಬಹುಮತ ಸಾಬೀತು ಪಡಿಸಲು 272 ಸ್ಥಾನಗಳು ಅಗತ್ಯವಾಗಿತ್ತು. ಹೀಗಾಗಿ ಬಿಜೆಪಿ ತನ್ನ ನೇತೃತ್ವದ ಎನ್ಡಿಎ ಪಕ್ಷಗಳ ಬೆಂಬಲ ಪಡೆದುಕೊಂಡಿದೆ. ಅತಂತ್ರ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟವು ಸರ್ಕಾರ ರಚಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಬಿಗ್ ಆಫರ್ವೊಂದನ್ನು ನೀಡಿತ್ತು ಎಂಬ ಮಾಹಿತಿ ಇದೀಗ ಹೊರ ಬಿದ್ದಿದೆ. ‘ನಿನ್ನೆ ನಿತೀಶ್ ಕುಮಾರ್ ಮತ್ತು ನಾಯ್ಡು ಸೇರಿದಂತೆ ಎಲ್ಲಾ ಎನ್ಡಿಎ ಸಂಸದರು ಪ್ರಧಾನಿ ಮೋದಿಯವರನ್ನು ಮೂರನೇ ಅವಧಿಗೆ ಬೆಂಬಲಿಸಿದರು. ಈ ಹಿಂದೆ ನಿತೀಶ್ ಕುಮಾರ್ ಅವರನ್ನು ರಾಷ್ಟ್ರೀಯ ಸಂಚಾಲಕರನ್ನಾಗಿ ನೇಮಿಸಲು ನಿರಾಕರಿಸಿದವರು ಈಗ ಅವರಿಗೆ ಪ್ರಧಾನಿ ಸ್ಥಾನವನ್ನು ನೀಡುತ್ತಿದ್ದಾರೆ’ ಎಂದು ಜೆಡಿಯು ಮುಖಂಡ ಕೆ.ಸಿ.ತ್ಯಾಗಿ ಬಹಿರಂಗಪಡಿಸಿದ್ದಾರೆ. 12 ಲೋಕಸಭಾ ಸ್ಥಾನಗಳೊಂದಿಗೆ ನಿತೀಶ್ ಕುಮಾರ್ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. 240 ಸ್ಥಾನಗಳನ್ನು ಗಳಿಸಿದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರ ರಚಿಸಲು ನಿರ್ಣಾಯಕವಾಗಿದೆ.