SUDDIKSHANA KANNADA NEWS/ DAVANAGERE/ DATE:14-02-2025
ದಾವಣಗೆರೆ: ತುಂಬಿದ ಕೊಡ ತುಳುಕಿತಲೇ ಪರಾಕ್! ಇದು ಇಂದು ಬಂದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ.
ಪ್ರತಿವರ್ಷವೂ ಈ ಕಾರ್ಣಿಕಕ್ಕೆ ಲಕ್ಷಾಂತರ ಭಕ್ತರು ಕಾದು ಕುಳಿತಿರುತ್ತಾರೆ. ಗೊರವಯ್ಯ ನುಡಿಯುವ ಕಾರ್ಣಿಕ ವರ್ಷದ ಭವಿಷ್ಯ ನಿರ್ಧಾರವಾಗಲಿದೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ. ಹಾಗಾಗಿ, ಈ ಭವಿಷ್ಯವಾಣಿ ತುಂಬಾನೇ ಪ್ರಸಿದ್ಧಿ ಪಡೆದಿದೆ. ಉತ್ತರ ಕರ್ನಾಟಕ ಮಾತ್ರವಲ್ಲ, ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಈ ಕಾರ್ಣಿಕ ಕೇಳಲು ಬರತ್ತಾರೆ. ಈ ಬಾರಿಯ ಕಾರ್ಣಿಕೋತ್ಸವ ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದು ಹೇಳುವ ಮೂಲಕ ಕುತೂಹಲ ಕೆರಳಿಸಿದೆ.
ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದರೆ ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು 139 ಸ್ಥಾನಗಳನ್ನು ಪಡೆದು ತುಂಬಿದೆ. ಆದ್ರೆ, ಡಿಸಿಎಂ ಡಿ. ಕೆ. ಶಿವಕುಮಾರ್ ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿರುವುದರಿಂದ ತುಂಬಿದ ಕೊಡ ತುಳುಕಿತಲೇ ಎಂದರೆ ಕಾಂಗ್ರೆಸ್ ನಲ್ಲಿ ಅಧಿಕಾರಕ್ಕೆ ಕಿತ್ತಾಟ ಶುರುವಾಗಲಿದೆ ಎಂದೂ ಹೇಳಲಾಗುತ್ತಿದೆ.
ಇನ್ನು ಕಳೆದ ವರ್ಷ ಭಾರೀ ಮಳೆಯಾಗಿತ್ತು. ಜಲಾಶಯಗಳು ಭರ್ತಿಯಾಗಿದ್ದವು. ಆದ್ರೆ, ಈ ಬಾರಿ ಮಳೆಯು ಉತ್ತಮವಾಗಲಿದೆ. ಜಲಾಶಯಗಳು ತುಂಬಿ ತುಳುಕುತ್ತವೆ ಎಂದೂ ರೈತರು ಹೇಳಿಕೊಳ್ಳುತ್ತಿದ್ದಾರೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣೀಕೋತ್ಸವ ಪ್ರತಿವರ್ಷವೂ ನಡೆಯುತ್ತದೆ.
ಹೂವಿನಹಡಗಲಿ ತಾಲೂಕಿನ ಮೈಲಾರದ ಡಂಗನಮರಡಿಯಲ್ಲಿ 18 ಅಡಿ ಬಿಲ್ಲನ್ನೇರಿ ಗೊರವಯ್ಯ ರಾಮಪ್ಪ ಈ ವರ್ಷದ ಅಂದರೆ 2025ರ ಭವಿಷ್ಯವಾಣಿ ಹೇಳಿದ್ದಾರೆ. ಈ ವೇಳೆ ಲಕ್ಷಾಂತರ ಭಕ್ತರು ಕೇಕೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು.
ಕಳೆದ ಬಾರಿ ಅಂದರೆ 2024ರಲ್ಲಿ “ಮಳೆ ಬೆಳೆ ಎಲ್ಲಾ ಸಂಪಾದಿತಲೇ ಪರಾಕ್” ಎಂದು ಭವಿಷ್ಯವಾಣಿ ನುಡಿದಿದ್ದು, ಇದರಂತೆಯೇ ಉತ್ತಮ ಮಳೆಯಾಗಿತ್ತು. ಬೆಳೆಯು ಕೂಡ ಚೆನ್ನಾಗಿ ಬಂದಿವೆ. ಇದರಿಂದ ಅನ್ನದಾತರ ಮುಖ ಅರಳಿತ್ತು.
ಕಾರ್ಣಿಕದ ಗೊರವಪ್ಪ ರಾಮಪ್ಪ ಅವರು 11 ದಿನಗಳ ಕಾಲ ಉಪವಾಸ ಮಾಡಿದ್ದು, ಇಂದು ಕಾರ್ಣಿಕ ನುಡಿಯುವ ದಿನ ವಿಶೇಷ ಪೂಜೆ ನೆರವೇರಿಸಿ ಕಾರ್ಣಿಕ ಹೇಳುತ್ತಾರೆ. ಇದು ಮೈಲಾರ ಲಿಂಗೇಶ್ವರನ ಭವಿಷ್ಯ ವಾಣಿ ಅಂತಾನೂ ಭಕ್ತರು ನಂಬುತ್ತಾರೆ.