SUDDIKSHANA KANNADA NEWS/ DAVANAGERE/ DATE:27-10-2024
ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ 32 ವರ್ಷದ ಮಹಿಳೆಯೊಬ್ಬಳ ದೇಹ ನಾಲ್ಕು ತಿಂಗಳ ಬಳಿಕ ಪತ್ತೆಯಾಗಿದೆ. ಈ ಹತ್ಯೆ ದೃಶ್ಯಂ ಸಿನಿಮಾ ನೋಡಿ ಪ್ರೇರೇಪಿತಗೊಂಡ ಜಿಮ್ ಟ್ರೈನರ್ ಹೂಡಿದ್ದ ನಾಟಕ ಬಟಾಬಯಲಾಗಿದೆ.
ಏಕ್ತಾ ಗುಪ್ತಾ ಅವರ ಜಿಮ್ ತರಬೇತುದಾರ ವಿಶಾಲ್ ಸೋನಿ ಹತ್ಯೆ ಮಾಡಿದ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ನೀಡಿದ ಸ್ಥಳದ ಬಗ್ಗೆ ಮಾಹಿತಿ ನೀಡಿದ ನಂತರ ಕಾನ್ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅವರ ಅಧಿಕೃತ ನಿವಾಸದ ಬಳಿಯ ಕ್ಲಬ್ನಿಂದ ಪೊಲೀಸರು ಶವ ಹೊರತೆಗೆದಿದ್ದಾರೆ.
ಮಹಿಳೆಯ ಪತಿ ರಾಹುಲ್ ಗುಪ್ತಾ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಲ್ ಸೋನಿಯನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ವಿಚಾರಣೆಯ ಸಮಯದಲ್ಲಿ, ಸೋನಿ ಮತ್ತು ಏಕ್ತಾ ಗುಪ್ತಾ ಅನೈತಿಕ ಸಂಬಂಧ ಹೊಂದಿದ್ದು ಪೊಲೀಸರಿಗೆ ಗೊತ್ತಾಗಿತ್ತು. ವಿಶಾಲ್ ಸೋನಿ ಮತ್ತೊಬ್ಬಾಕೆ ಜೊತೆ ನಿಶ್ಛಿತಾರ್ಥ ಮಾಡಿಕೊಂಡಿದ್ದಕ್ಕೆ ಏಕ್ತಾ ಗುಪ್ತಾ ವಿರೋಧ ವ್ಯಕ್ತಪಡಿಸಿದ್ದಳು. ತನ್ನ ಜೊತೆಗಿನ ಸಂಬಂಧ ಮುಂದುವರಿಸುವಂತೆ ಪೀಡಿಸುತ್ತಿದ್ದಳು ಎಂದು ತಿಳಿದು ಬಂದಿದೆ.
ಜೂನ್ 24 ರಂದು, ಏಕ್ತಾ ಜಿಮ್ಗೆ ಬಂದಿದ್ದಳು. ಈ ವೇಳೆ ವಿಶಾಲ್ ಹಾಗೂ ಏಕ್ತಾ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳವಾಗಿತ್ತು. ಈ ವೇಳೆ ಜಿಮ್ ಟ್ರೈನರ್ ವಿಶಾಲ್ ಆಕೆಗೆ ಗುದ್ದಿದ್ದ. ಬಳಿಕ ಮೂರ್ಚೆ ಹೋದಳು. ನಂತರ ಆಕೆಯನ್ನು ಕೊಲೆ ಮಾಡಿ ಆರೋಪಿ ಶವವನ್ನು ಕಾನ್ಪುರ ಡಿಎಂ ನಿವಾಸದ ಬಳಿಯ ಕ್ಲಬ್ನಲ್ಲಿ ಹೂತಿಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಮೂಲಗಳ ಪ್ರಕಾರ, ಬಾಲಿವುಡ್ ಚಿತ್ರ ದೃಶ್ಯಂ ನೋಡಿದ ನಂತರ ಕಾನ್ಪುರ ಡಿಎಂ ನಿವಾಸದ ಬಳಿ ಮಹಿಳೆಯನ್ನು ಸಮಾಧಿ ಮಾಡುವ ಆಲೋಚನೆ ಸೋನಿಗೆ ಬಂದಿತ್ತು. ಚಲನಚಿತ್ರದ ಅಜಯ್ ದೇವಗನ್ ಅವರ ಪಾತ್ರದ ನಾಯಕತ್ವವನ್ನು ವಹಿಸಿಕೊಂಡು, ಸೋನಿಯು ಏಕ್ತಾ ಅವರ ಶವವನ್ನು ಕಾನ್ಪುರ ಡಿಎಂ ನಿವಾಸದ ಬಳಿ ಸಮಾಧಿ ಮಾಡಿದ. ಪೊಲೀಸರು ಅಂತಹ ಉನ್ನತ ಪ್ರದೇಶದಲ್ಲಿ ಕೊಲೆಯನ್ನು ಅನುಮಾನಿಸಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಶಾಲ್ ಸೋನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಮಹಿಳೆ ದೇಹ ಹೊರತೆಗೆಯಲಾಗಿದ್ದು ಆಕೆ ಕುಟುಂಬದವರು ಏಕ್ತಾ ಗುಪ್ತಾಳೇ ಎಂದು ಗುರುತಿಸಿದ್ದಾರೆ. ತನಿಖೆ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳನ್ನು ಅನುಸರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಮಹಿಳೆಯ ಪತಿ ರಾಹುಲ್ ಗುಪ್ತಾ ಅವರು ತಮ್ಮ ಪತ್ನಿ ಜಿಮ್ ಟ್ರೈನರ್ ಜೊತೆ ಸಂಬಂಧ ಹೊಂದಿದ್ದರು ಎಂಬ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಯಾವುದೇ ಅನೈತಿಕ ಸಂಬಂಧ ಹೊಂದಿರಲಿಲ್ಲ. ಇದು ಅಪಹರಣದ ಪ್ರಕರಣ. ನಾವು ಕಿಡ್ನಾಪ್ ಕೇಸ್ ದಾಖಲಿಸಿದ್ದೇವೆ. ನಾಲ್ಕು ತಿಂಗಳಲ್ಲಿ ಎರಡು ಬಾರಿ ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದೇವೆ” ಎಂದು ಆಕೆಯ ಪತಿ ತಿಳಿಸಿದ್ದಾರೆ.