SUDDIKSHANA KANNADA NEWS/ DAVANAGERE/ DATE:09-12-2024
ದಾವಣಗೆರೆ: ದಾವಣಗೆರೆ ಬಿಜೆಪಿಯಲ್ಲಿನ ಭಿನ್ನಮತ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಗೋಚರಿಸುತ್ತಿಲ್ಲ. ನವದೆಹಲಿಯಲ್ಲಿ ಡಾ. ಜಿ. ಎಂ. ಸಿದ್ದೇಶ್ವರ ಅವರು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅಂಡ್ ಟೀಂ ವಿರುದ್ಧ ಹೇಳಿಕೆ ನೀಡುತ್ತಿದ್ದಂತೆ ಮತ್ತೆ ಭಿನ್ನಮತ ತಾರಕಕ್ಕೇರಿದೆ. ಬಿಪಿ ಹರೀಶ್ ಮತ್ತು ಸಿದ್ದೇಶ್ವರ ವಿರುದ್ಧ ಮಾಜಿ ಸಚಿವ ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ. ಪಿ. ರೇಣುಕಾಚಾರ್ಯ ಶಾಸಕ ಬಿಪಿ ಹರೀಶ್, ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಅವರು ಬಸನಗೌಡ ಪಾಟೀಲ್ ಯತ್ನಾಳ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಲು ಸಿದ್ದೇಶ್ವರರ ದುರಹಂಕಾರ ಕಾರಣ ಎಂದು ಆರೋಪಿಸಿದರು.
ಬಿಪಿ ಹರೀಶ್ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ರಾಷ್ಟ್ರೀಯ ನಾಯಕನಾಗಲು ಹೊರಟಿದ್ದಾನೆ. ಆತ ಈಗ ದೊಡ್ಡ ಮನುಷ್ಯ ಆಗಿದ್ದಾನೆ.ಹರಿಹರ ಜನ ನಿನ್ನ ನೋಡಿ ಮತ ನೀಡಿಲ್ಲ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ಮುಖ ನೋಡಿ ಮತ ಹಾಕಿದ್ದಾರೆ. ನಮ್ಮ ಬಗ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ. ಬಿ. ಎಸ್. ಯಡಿಯೂರಪ್ಪರ ಬಗ್ಗೆ ಮಾತನಾಡಿದರೆ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದರು.
ಹರೀಶ್ ಗೆ ನಾಚಿಕೆಯೇ ಇಲ್ಲ. ರಾತ್ರೋ ರಾತ್ರಿ ಕಾಂಗ್ರೆಸ್ ಗೆ ಹೋಗಿದ್ದು ಗೊತ್ತು. ಅವತ್ತು ನಾನೇ ಯಡಿಯೂರಪ್ಪರ ಬಳಿ ಕರೆದುಕೊಂಡು ಹೋಗಿ ಬಿಜೆಪಿಗೆ ಸೇರಿಸಿದ್ದೆ. ಅದನ್ನು ಮರೆತುಬಿಟ್ಟಿದ್ದಾನೆ. ಯಾವ ಮುಖ ಇಟ್ಟುಕೊಂಡು ಈಗ ಮಾತಾಡ್ತೀಯಾ? ಎಂದು ಪ್ರಶ್ನಿಸಿದರು.
ಸಂಸದ ರಾಘವೇಂದ್ರ ಅವರ ಅಭಿವೃದ್ದಿ ಕೆಲಸ ಮೆಚ್ಚಿ ರಾಘವೇಂದ್ರ ಅವರನ್ನ ಗೆಲ್ಲಿಸಿ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದರು. ಲೋಕಸಭೆಗೆ ಹರಿಹರದಲ್ಲಿ ಎಷ್ಟು ಮತಗಳ ಮುನ್ನಡೆ ಕೊಡಿಸಿದ್ದೀಯಾ? ನೀನು ಎಷ್ಟು ಮತ ಪಡೆದಿದ್ದೀಯಾ? ನನ್ನ ಮನೆಯಲ್ಲೇ 24 ಘಂಟೆ ಇರುತ್ತಿದ್ದೆಯಲ್ವಾಾ ಮೂರ್ಖ ನೀನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಿಂದ ಮನೆಗೆ ಎರಡು ಬಗೆಯುವ ವ್ಯಕ್ತಿ ನೀನು.ಇದೇ ರೀತಿ ಮುಂದುವರಿದರೆ ಹರಿಹರ ಕ್ಷೇತ್ರದ ಜನರೇ ಛೀಮಾರಿ ಹಾಕ್ತಾರೆ. ಈಗಾಗಲೇ ಛೀಮಾರಿ ಹಾಕಲು ಶುರು ಮಾಡಿದ್ದಾರೆ. ಯಡಿಯೂರಪ್ಪನವರ ಬಗ್ಗೆ ಮಾತನಾಡಿದವರು ಸರ್ವನಾಶ ಆಗ್ತಾರೆ ಎಂದು ರೇಣುಕಾಚಾರ್ಯ ಕಿಡಿಕಾರಿದರು.
ರಾಜ್ಯದಲ್ಲಿ ಸುಳ್ಳು ಭರವಸೆ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಮಾನವೀಯತೆ ಇಲ್ಲ. 135ಕ್ಕೂ ಹೆಚ್ಚು ನವಜಾತ ಶಿಶುಗಳ ಮಾರಣಹೋಮ ಆಗಿದೆ. 300 ಕ್ಕೂ ಹೆಚ್ಚು ಬಾಣಂತಿಯರ ಸಾವು ಆಗಿದೆ. ಆರೋಗ್ಯ ಸಚಿವ ದಿನೇಶ್ ಬಳ್ಳಾರಿ ಭೇಟಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಪ್ರಕರಣ ವಿಚಾರ ಮೂರು ಸಚಿವರು ಇದ್ದರೂ ಇಂಥ ಘೋರ ದುರಂತ ನಡೆದಿದೆ. ಸಚಿವರು ಜನರಿಗಾಗಿ
ಕೆಲಸ ಮಾಡದೇ ಹಣ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಆರೋಪಿಸಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲಾದರೂ ಭೇಟ ಕೊಟ್ಟಿದ್ದಾರೆ,…? ಸಚಿವ ಶರಣಪ್ರಕಾಶ್ ಪಾಟೀಲ್ ಮಾಯವಾಗಿದ್ದಾರೆ. ಸಿಎಂ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ, ಸಿಎಂ ಭೇಟಿ ಕೊಡಬೇಕಿತ್ತು, ತನಿಖೆ ಮಾಡಿಸಬೇಕಿತ್ತು, ಬದಲಾಗಿ ವರದಿ ಕೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂರು ಉಪಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಪಾಕಿಸ್ತಾನ ಗೆದ್ದ ರೀತಿ ಹಾಸನದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಹಣ, ಅಧಿಕಾರ ದುರುಪಯೋಗಪಡಿಸಿಕೊಂಡು ಮೂರು ಕಡೆ ಗೆದ್ದಿದ್ದಾರೆ. ಸರ್ಕಾರಕ್ಕೆ ಜನ ಛೀಮಾರಿ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ರಾಜೀನಾಮೆ ವಿಚಾರ ಪರೋಕ್ಷವಾಗಿ ಹೇಳಿದ್ದಾರೆ. ಹೆಚ್ಚು ದಿನ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವುದಿಲ್ಲ ಎಂದು ಭವಿಷ್ಯ ನುಡಿದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ್, ಮಾಡಾಳ್ ಮಲ್ಲಿಕಾರ್ಜುನ್, ಜಯರುದ್ರೇಶ್, ಪ್ರವೀಣ್ ಜಾಧವ್, ರಾಜು ಮತ್ತಿತರರು ಹಾಜರಿದ್ದರು.