SUDDIKSHANA KANNADA NEWS/ DAVANAGERE/ DATE:17-08-2024
ದಾವಣಗೆರೆ: ಹಿಂದುಳಿದ ನಾಯಕ ಸಿಎಂ ಸಿದ್ದರಾಮಯ್ಯರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಡಾ ಹಗರಣ ಸಂಬಂಧ ವಿವೇಚನೆ ಬಳಸಿಲ್ಲ. ಸಂವಿಧಾನಾತ್ಮಕವಾಗಿ ನಡೆದುಕೊಂಡಿದ್ದಾರೆ. ಖುರ್ಚಿಗೆ ಅಂಟಿಕೊಳ್ಳದೇ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಚಿವರಾದ ಪರಮೇಶ್ವರ್, ಡಿ.ಕೆ. ಶಿವಕುಮಾರ್, ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ಸಚಿವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ಥಿರಗೊಳಿಸಲು ರಾಜ್ಯಪಾಲರ ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಹೇಳಿದರು.
ಸಿರಾಜುದ್ದಿನ್ ಪಾಷಾ ಸೇರಿ ಇಬ್ಬರು ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗ ಶುಭ್ರವಾಗಿದ್ದ ರಾಜಭವನ ಇಂದು ಮಲಿನವಾಗಿದೆಯಾ? ಸಿಬಿಐ, ಇಡಿ ಕೈಗೊಂಬೆ ಮಾಡಿಕೊಂಡಿದ್ದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ. ಬಿಜೆಪಿ ಅಲ್ಲ ಎಂದು ತಿಳಿಸಿದರು.
ಬಡವರಿಗೆ ನಿವೇಶನ ನೀಡಲು ಎಲ್ಲಾ ಪ್ರಾಧಿಕಾರಗಳಿರುವುದು. 87 ಸಾವಿರ ಅರ್ಜಿಗಳಲ್ಲಿ ಸಿದ್ದರಾಮಯ್ಯರ ಸಾವಿರಾರು ಹಿಂಬಾಲಕರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ನಾಲ್ಕುವರೆ ಸಾವಿರ ಕೋಟಿ ರೂಪಾಯಿ ಮೌಲ್ಯದ ನಿವೇಶನ ನೀಡಲಾಗಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಅಶೋಕ್ ಚರ್ಚೆಗೆ ಅವಕಾಶ ಕೇಳಿದರೂ ನೀಡದೇ ಸ್ಪೀಕರ್ ದುರುಪಯೋಗಪಡಿಸಿಕೊಂಡರು. ಸದನದಲ್ಲಿ ಏಕೆ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಪಲಾಯನವಾದಿಗಳಾದರು. ಬಿಜೆಪಿ – ಜೆಡಿಎಸ್ ಪಾದಯಾತ್ರೆ ಮಾಡಿದಾಗ ಸುಳ್ಳು ದಾಖಲೆ ಬಿಡುಗಡೆ ಮಾಡಿದರು. ಏಕವಚನದಲ್ಲಿ ಬಿಜೆಪಿ – ಜೆಡಿಎಸ್ ನಾಯಕರ ಟೀಕೆ ಮಾಡಿದರು. ಜನರಿಗೆ ಮಕ್ಮಲ್ ಟೋಪಿ ಹಾಕಿದ್ರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾತ್ರ ರಾಜಭವನ ಪರಿಶುದ್ಧವಾಗಿರುತ್ತೆ. ಬೇರೆಯವರು ಅಧಿಕಾರ ಬಂದಾಗ ಅಶುದ್ಧವಾಗುತ್ತಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾನೂನು ಬಾಹಿರವಾಗಿ ಪಡೆದ ನಿವೇಶನಗಳು. ಹಾಗಾಗಿ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಆರೋಪ ಮುಕ್ತರಾಗಿ ಬಂದ ಬಳಿಕ ಮತ್ತೆ ಮುಖ್ಯಮಂತ್ರಿಯಾಗಿ ಎಂದು ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಕಡ್ಲೇಬಾಳು ಧನಂಜಯ್, ಜಿಲ್ಲಾ ವಕ್ತಾರ ಸತೀಶ್ ಎಂ. ಕೊಳೇನಹಳ್ಳಿ, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಪ್ರವೀಣ್ ಜಾಧವ್ ಮತ್ತಿತರರು ಹಾಜರಿದ್ದರು.