SUDDIKSHANA KANNADA NEWS/ DAVANAGERE/ DATE:16-08-2024
ದಾವಣಗೆರೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಬದಲಾವಣೆ ಪ್ರಶ್ನೆಯೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಜೆ. ಪಿ. ನಡ್ಡಾ ಅವರು ನೇಮಕ ಮಾಡಿದ್ದಾರೆ. ನಾವು ವಿರೋಧ ವ್ಯಕ್ತಪಡಿಸಿದರೆ ಅವರಿಗೆ ಅಪಮಾನ ಮಾಡಿದಂತೆ ಎಂದು ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರು ವಿರೋಧಿಗಳಿಗೆ ಠಕ್ಕರ್ ನೀಡಿದ್ದಾರೆ.
ಪತ್ರಿಕಾಗೋಷ್ಛಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ವಿಜಯೇಂದ್ರ ಕಟ್ಟುತ್ತಿದ್ದಾರೆ. ಜೆಡಿಎಸ್ ಜೊತೆಗೂಡಿ ಬೆಂಗಳೂರು ಟು ಮೈಸೂರು ಪಾದಯಾತ್ರೆಯು ಯಶಸ್ವಿಯಾಗಿದೆ. ಜೆಡಿಎಸ್ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ, ಕೇಂದ್ರ ಸಚಿವರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಸೇರಿದಂತೆ ಲಕ್ಷಾಂತರ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದ ಕಾಂಗ್ರೆಸ್ ಗೆ ನಡುಕ ಶುರುವಾಗಿದೆ ಎಂದು ತಿಳಿಸಿದರು.
ಬಿಜೆಪಿ ಶಿಸ್ತಿನ ಪಕ್ಷ. ಯಾವುದೇ ಕಾರಣಕ್ಕೆ ನಮ್ಮವರೇ ಗೊಂದಲ ಸೃಷ್ಟಿಸುವುದು ಬೇಡ. ಏನೇ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಂಡು ಚರ್ಚಿಸಿ, ಸಮಸ್ಯೆ ಪರಿಹರಿಸಿಕೊಳ್ಳಬೇಕು. ಹೈಕಮಾಂಡ್ ನವರು ಶಾಸಕರಾದ ಬಸನಗೌಡ ಪಾಟೀಲ್, ರಮೇಶ್ ಜಾರಕಿಹೊಳಿ ಸೇರಿದಂತೆ ಕೆಲವರು ಹಮ್ಮಿಕೊಂಡಿರುವ ಪಾದಯಾತ್ರೆಗೆ ಅನುಮತಿ ನೀಡಿದರೆ ಮಾಡಲಿ. ಯಾರು ಬೇಡವೆನ್ನುವುದಿಲ್ಲ. ನಾವೂ ಪಾಲ್ಗೊಳ್ಳುತ್ತೇವೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ಎಲ್ಲರೂ ಬದ್ಧರಿರಬೇಕು. ಯತ್ನಾಳ್ ಕೂಡ ನನ್ನ ಆತ್ಮೀಯ ಸ್ನೇಹಿತರೇ. ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಎಂಬ ವಾದ ಸರಿಯಲ್ಲ ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು.
ಭಿನ್ನಮತ ಏನೂ ಇಲ್ಲ, ಅಪಸ್ವರ ಎಂದೇನಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಪಾದಯಾತ್ರೆ ನಡೆಸಿದರೆ ತಪ್ಪೇನಿಲ್ಲ. ದೊಡ್ಡ ಪಕ್ಷಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಕುಳಿತುಕೊಂಡು ಸಮಾಲೋಚನೆ ನಡೆಸಿ
ನಾಲ್ಕು ಗೋಡೆಗಳ ಮಧ್ಯೆಯೇ ಬಗೆಹರಿಸಿಕೊಳ್ಳಬೇಕು. ಬಹಿರಂಗವಾಗಿ ಪಕ್ಷದ ವಿರುದ್ಧ, ಅಧ್ಯಕ್ಷರ ವಿರುದ್ಧ ಮಾತನಾಡಬಾರದು ಎಂದು ಹೇಳಿದರು.
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರಿಗೆ ಸರಿಸಾಟಿ ಇಲ್ಲ. ಮತ್ತೊಬ್ಬ ಯಡಿಯೂರಪ್ಪ ಹುಟ್ಟಲು ಸಾಧ್ಯವಿಲ್ಲ. ಯಡಿಯೂರಪ್ಪರಿಗೆ ಯಡಿಯೂರಪ್ಪರೇ ಸಾಟಿ. ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಿ, ಅಧಿಕಾರಕ್ಕೆ ತಂದ ನಾಯಕರು. ಅವರ ಬಗ್ಗೆ
ಹಗುರವಾಗಿ ಯಾರೂ ಮಾತನಾಡಬಾರದು ಎಂದು ಎಂ. ಪಿ. ರೇಣುಕಾಚಾರ್ಯ ಸಲಹೆ ನೀಡಿದರು.