SUDDIKSHANA KANNADA NEWS/ DAVANAGERE/ DATE:29-10-2024
ದಾವಣಗೆರೆ: ವಕ್ಫ್ ಬೋರ್ಡ್ ಗೆ ಜಮೀನು ನೀಡಿದ್ದಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ನ್ಯಾಮತಿ ತಾಲೂಕಿನ ಸುಂಕದಕಟ್ಟೆ ಗ್ರಾಮಕ್ಕೆ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಸ್ಥಳಕ್ಕೆ ಭೇಟಿ ನೀಡಿದರು.
ರೈತರೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ರೈತರು ಭಾರೀ ವಿರೋಧ ವ್ಯಕ್ತಪಡಿಸಿದರು. ಮಾತ್ರವಲ್ಲ, ಭೂಮಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ರೇಣುಕಾಚಾರ್ಯ ಅವರೂ ಸಹ ಒಂದು ಗುಂಟೆ ಭೂಮಿಯನ್ನು ವಕ್ಫ್ ಬೋರ್ಡ್ ಗೆ ನೀಡಲು ಬಿಡುವುದಿಲ್ಲ ಎಂದು ಘೋಷಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2 ಲಕ್ಷದ 30 ಸಾವಿರ ಕೋಟಿ ರೂಪಾಯಿ ಮೌಲ್ಯದ 29 ಸಾವಿರ ಎಕರೆ ಭೂಮಿಯನ್ನು ಕಾಂಗ್ರೆಸ್ ನ ಪ್ರಭಾವಿ ನಾಯಕರು ನುಂಗಿದ್ದಾರೆ. ಕಮರ್ಷಿಯಲ್ ಜಾಗವನ್ನೂ ಬಿಟ್ಟಿಲ್ಲ. ನಮ್ಮ ಬಳಿ
ದಾಖಲಾತಿಗಳಿವೆ. ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಅವಕಾಶ ಕೊಡಿ, ಚರ್ಚೆ ಮಾಡುತ್ತೇವೆ ಎಂದರೆ ಆಗಲಿಲ್ಲ. ಪ್ರಭಾವಿ ಸಚಿವರು ಲೂಟಿ ಮಾಡಿದ್ದು ಸಿಎಂ ಸಿದ್ದರಾಮಯ್ಯನವರು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ವಕ್ಫ್ ಬೋರ್ಡ್ ಗೆ ನೀಡಿರುವ ಭೂಮಿ ಅತಿಕ್ರಮಣವಾಗಿದ್ದು, ತಾಕತ್ತಿದ್ದರೆ ರಾಜ್ಯ ಸರ್ಕಾರ ಜಮೀನು ಮರುವಶಪಡಿಸಿಕೊಳ್ಳಬೇಕು. ಎಲ್ಲೇ ಆದರೂ ಒಬ್ಬ ರೈತನಿಗೆ ನೊಟೀಸ್ ಕೊಟ್ಟರೆ ಸಹಿಸಲ್ಲ. ಸುಂಕದಕಟ್ಟೆಯ
ನರಸಿಂಹ ಸ್ವಾಮಿ, ಮಂಜುನಾಥ ಸ್ವಾಮಿ ದೇವಸ್ಥಾನ ಇದೆ. ಪವಿತ್ರ ಜಾಗವನ್ನು ನೀಡುವ ಹುನ್ನಾರ ನಡೆದಿದೆ. ದೇವಸ್ಥಾನಕ್ಕೆ ಜಾಗ ನೀಡಿ ಎಂದರೆ ನೀಡುತ್ತಿಲ್ಲ. ತುಂಗಾಭದ್ರಾ ನದಿ ಸೇತುವೆ ಬಳಿ ಪವಿತ್ರವಾದ ಆಂಜನೇಯ ಸ್ವಾಮಿ ದೇವಸ್ಥಾನ ಇದೆ. ದಾರಿ ಬಂದ್ ಮಾಡಲು ಹೊರಟಿದ್ದರು. ನಾವು ತಡೆದಿದ್ದೇವೆ. ಕರ್ನಾಟಕದಲ್ಲಿ ಪಾಕಿಸ್ತಾನದವರು ಬಂದು ಆಡಳಿತ ಮಾಡುವ ರೀತಿ ಮಾಡುತ್ತಿದ್ದಾರೆ. ಒಂದು ಗುಂಟೆ ಭೂಮಿಯನ್ನು ವಕ್ಫ್ ಬೋರ್ಡ್ ಗೆ ಕೊಡಬಾರದು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಬೇಕಾಬಿಟ್ಟಿಯಾಗಿ ಭೂಮಿಯನ್ನು ವಕ್ಫ್ ಬೋರ್ಡ್ ಹಸ್ತಾಂತರ ಮಾಡಲಾಗಿದೆ. ಕಮರ್ಷಿಯಲ್ ಜಾಗವನ್ನೂ ಬಿಟ್ಟಿಲ್ಲ. ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಇದೆ. ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಇದಕ್ಕಾಗಿ ಈ ರೀತಿಯಾಗಿ ವಕ್ಫ್ ಬೋರ್ಡ್ ಗೆ ನೀಡುತ್ತಿದೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಆರೋಪಿಸಿದರು.
ಸಚಿವ ಜಮೀರ್ ಅಹ್ಮದ್ ಖಾನ್ ಸೂಪರ್ ಸಿಎಂನಂತೆ ಸಿದ್ದರಾಮಯ್ಯರ ಹಿಂದೆ ಮುಂದೆ ಓಡಾಡುತ್ತಿದ್ದಾರೆ. ಈ ಮೂಲಕ ಸಿದ್ದರಾಮಯ್ಯರ ಹೆಸರಿಗೆ ಕಳಂಕ ತರುತ್ತಿದ್ದಾರೆ. ಇಂಥವರನ್ನು ಸಚಿವ ಸಂಪುಟದಿಂದ ಕೈಬಿಡಿ. ಟಿಪ್ಪು ಜಯಂತಿ ತಂದು ಕರ್ನಾಟಕದಲ್ಲಿ ಗಲಾಟೆಯಾಗಲು ಕಾರಣರಾದರು. ಇದೇನೂ ಜಮೀರ್ ಅಹ್ಮದ್ ಅಪ್ಪನ ಆಸ್ತಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.