SUDDIKSHANA KANNADA NEWS/ DAVANAGERE/ DATE-02-06-2025
ದಾವಣಗೆರೆ: ಹಿಂದೂ ಸಮಾಜ ಹಾಗೂ ಹಿಂದೂಗಳ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಾಪಗಿಟ್ಟಿರುವ ಆರ್ ಎಸ್ ಎಸ್ ಮುಖಂಡ ಕಲಡ್ಕ ಪ್ರಭಾಕರ್ ಭಟ್ ಮತ್ತು 15 ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ದ ಎಫ್ ಐಆರ್ ದಾಖಲಿಸುವ ಮೂಲಕ ರಾಜ್ಯ ಸರ್ಕಾರ ಮತ್ತೇ ಹಿಂದೂಗಳನ್ನೇ ಗುರಿಯಾಗಿಸಿರುವುದು ಸ್ಪಷ್ಟವಾಗುತ್ತಿದೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡ, ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರುವ ಮಾಡುವ ಆದೇಶ
ಹೊರಡಿಸಿರುವುದು ದ್ವೇಷ ರಾಜಕಾರಣವಲ್ಲದೇ ಇನ್ನೇನು? ಇದಕ್ಕೆ ಸಿ,ಎಂ ಸಿದ್ದರಾಮಯ್ಯ ಗೃಹ ಸಚಿವರಾದ ಡಾ. ಪರಮೇಶ್ವರ್ ಅವರುಗಳು ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ದ್ವೇಷ ಭಾಷಣ ಮಾಡಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ಹಿರಿಯರಾದ ಕಲಡ್ಕ ಪ್ರಭಾಕರ್ ಭಟ್ ಮತ್ತು ಇತರರ ವಿರುದ್ದ ದೂರು ದಾಖಲಿಸುವುದಾದರೆ, ಹಿಂದೂಗಳು ಮೇಲೆ ಪ್ರತಿನಿತ್ಯ ಬೆಂಕಿಯುಗುಳುವವರ ಮೇಲೆ ಇನ್ನೂ ಏಕೆ ದೂರು ದಾಖಲಾಗಿಲ್ಲ.ಕೇವಲ ಹಿಂದೂಗಳು ಮಾತನಾಡಿದರೆ, ಕೋಮುವಾದ ಹುಟ್ಟುತ್ತದೆ ಎನ್ನುವುದಾದರೆ, ಅನ್ಯ ಸಮಾಜದ ಮುಖಂಡರು ರಾಷ್ಟ್ರಪೀತ ಮಹಾತ್ಮಾ ಗಾಂಧಿಯವರ ಅಹಿಂಸಾ ತತ್ವವನ್ನು ಪ್ರತಿಪಾದನೆ ಮಾಡುತ್ತಿದ್ದಾರೆಯೇ? ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಏಕೆ? ಎಂದು ಪ್ರಶ್ನಿಸಿದರು.
ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಓಟ್ ಬ್ಯಾಂಕ್ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಇತ್ತೀಚಿಗೆ ಕಾಂಗೆರಸ್ ಸರ್ಕಾರದ ಆಡಳಿತದ ವೈಖರಿ ಹಾಗೂ ಭ್ರಷ್ಟಚಾರಕ್ಕೆ ಬೇಸತ್ತಿರುವ ನಿಮ್ಮ ಖಾಯಂ ಬ್ರದರ್ಸ್ಗಳು ನಿಮ್ಮ ಪಕ್ಷದಿಂದಲೇ ದೂರ ಸರಿಯುತ್ತಿದ್ದು, ಕೆಲವರು ಈಗಾಗಲೇ ರಾಜೀನಾಮೆಯನ್ನು ನೀಡಿದ್ದಾರೆ. ಹಿಂದೂ ಮುಖಂಡರು, ಸಂಘಟನೆಯ ಪ್ರಮುಖರ ಮೇಲೆ ದೂರು ದಾಖಲಿಸಿದರೆ ಕಾಂಗ್ರೆಸ್ ಪಕ್ಷದ ಮೇಲೆ ಮುನಿಸಿಕೊಂಡವರು ಮತ್ತೆ ‘ ಕೈ ‘ ನತ್ತ ಮುಖ ಮಾಡುವರೇ ಎಂಬ ದೂರಾಲೋಚನೆಯಿಂದ
ಒಂದು ಸಮುದಾಯದ ಮೇಲೆ ದೂರು ದಾಖಲು ಮಾಡುತ್ತಿದ್ದಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟಕ್ಕೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷ ಹಾಗೂ ಹಿಂಸೆಗೆ ಪ್ರೇರಣೆ ನೀಡಿದವರು ಯಾರು ? ತಲವಾರು, ಕತ್ತಿ ಝಳಪಿಸಿ ಹತ್ಯೆಯ ಮಾತುಗಳನ್ನು ಆಡಿದವರನ್ನು ಪೊಲೀಸರು ಏಕೆ ಮುಟ್ಟುತ್ತಿಲ್ಲ? ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದವರಿಗೆ, ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ರವಾನಿಸಿದವರ ಮೇಲೆ ಮಾತ್ರ ನಿಮ್ಮ ಕಾನೂನು ಕ್ರಮವೇ ? ಎಂದು ಕೇಳಿದ್ಜಾರೆ.
ಪೊಲೀಸರ ಈ ಕ್ರಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತಷ್ಟು ಪ್ರಕ್ಷುಬ್ಧತೆ ಮೂಡಿಸುವುದಕ್ಕೆ ಕಾರಣವಾಗುತ್ತದೆ. ಎಫ್ ಐಆರ್ ಅಸ್ತ್ರ ಬಳಸಿ ಶಾಂತಿ ಸ್ಥಾಪನೆಯ ಭ್ರಮ ಬೇಡ. ಸಮಾಜದ ಎಲ್ಲ ವರ್ಗದಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮೊದಲು ಮಾಡಿ. ತಕ್ಷಣವೇ ರಾಜ್ಯ ಸರ್ಕಾರ ಎಫ್ಐ ಆರ್ ಹಾಗೂ ಗಡೀಪಾರು ನೋಟೀಸ್ ಅನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಾಗುವ ಎಲ್ಲಾ ಆನಾಹುತಗಳಿಗೆ ಇಲ್ಲಿನ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂಬುದನ್ನು ನೆನಪಿಸುವೆ! ಎಂದು ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.