ದಾವಣಗೆರೆ: ಇ ಸ್ವತ್ತು ಆಂದೋಲನ ನಡೆಸಿ ಜನವರಿ 1 ರೊಳಗಾಗಿ ಇ- ಸ್ವತ್ತು ಮಾಡಿಕೊಡಲು ಕ್ರಮ ವಹಿಸಬೇಕೆಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾವಣಗೆರೆ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿರುವ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ಸಭಾಂಗಣದಲ್ಲಿ ದಾವಣಗೆರೆ ತಾಲ್ಲೂಕಿನ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿ ಅವರು ಮಾತನಾಡಿದರು.
ಪಿಡಿಒ ಅಧಿಕಾರಿಗಳು ಹೊಸ ಹೊಸ ಯೋಜನೆಗಳ ಮೂಲಕ ಪಂಚಾಯತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮಾಡಬೇಕು.ಗ್ರಾಮೀಣಭಾಗದ ಸರ್ಕಾರಿ ಶಾಲೆ,ಆಸ್ಪತ್ರೆಗಳು ಸುಧಾರಣೆ ಮಾಡಬೇಕು.ಆರೋಗ್ಯ ಶಿಬಿರ ಹಾಗೂ ಸ್ವಚ್ಚತೆ ಮೂಲಕ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.ಬಹಳಷ್ಟು ಗ್ರಾಮೀಣ ಭಾಗದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ದೂರು ಬರುತ್ತಿವೆ ಇದಕ್ಕೆ ಅವಕಾಶ ನೀಡದಂತೆ ಕೆಲಸ ಮಾಡಬೇಕು.ಒಂದು ವೇಳೆ ದೂರುಗಳು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಜನರು ಸಮಸ್ಯೆ ಹೇಳಿಕೊಂಡು ಬಂದಾಗ. ನಮ್ಮ ಪಂಚಾಯ್ ವ್ಯಾಪ್ತಿಗೆ ಸಂಬಂಧಪಡುವುದಿಲ್ಲ ಎಂದು ಹೇಳದೆ ಸರಿಯಾದ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು.
ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳುತ್ತೇವೆ ಅದಕ್ಕೆ ತಕ್ಕನಾಗಿ ಕೆಲಸ ಮಾಡುವುದು ಎಲ್ಲರ ಜವಾಬ್ದಾರಿ ಅದನ್ನು ಅರಿತು ಜನಪರ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲೆ ಬಿಟ್ಟು ಹೋಗಬಹುದು ಎಂದು ಖಡಕ್ ಎಚ್ಚರಿಕೆ ನೀಡಿದ ಸಂಸದರು ಜನರ ಕೆಲಸ ಮಾಡುವ ಅಧಿಕಾರಿಗಳನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವುದಾಗಿಯೂ ಹೇಳಿದರು.ಸರ್ಕಾರಿ ಸೌಲಭ್ಯಗಳು ಪಂಚಾಯತಿಯ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಈ ಬಗ್ಗೆ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು.ಗ್ರಾಮೀಣ ಭಾಗದ ಜನರು ಮೂಲಭೂತ ಸೌಕರ್ಯ ಒದಗಿಸುವಂತೆ ನನ್ನ ಬಳಿ ಬಂದು ಮನವಿ ಸಲ್ಲಿಸುತ್ತಾರೆ ಎಂದರೆ ಪಿಡಿಒ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದಾಗುತ್ತದೆ ಅದಕ್ಕೆ ಅವಕಾಶ ನೀಡದಂತೆ ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತವಾಗಿ ಜನರಿಗೆ ಸ್ಪಂದಿಸಬೇಕು ಇದು ಪಿಡಿಒ ಅಧಿಕಾರಿಗಳೊಂದಿಗೆ ನನ್ನ ಮೊದಲ ಸಭೆ ಹಾಗೂ ಕೊನೆಯ ಎಚ್ಚರಿಕೆ ಎಂದು ನಯವಾಗಿ ಅಧಿಕಾರಿಗಳಿಗೆ ಕೆಲಸ ಮಾಡುವಂತೆ ಚುರುಕು ಮುಟ್ಟಿಸಿದರು.
ಸಭೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್ ಮೊದಲಾದವುಗಳ ಅಭಿವೃದ್ಧಿಗೆ ಒತ್ತು ನೀಡುವುದು ಹಾಗೂ ಸರ್ಕಾರಿ ಶಾಲೆಗಳ ಗುಣಮಟ್ಟ ಮತ್ತು ಗ್ರಾಮೀಣ ಆರೋಗ್ಯ ಕೇಂದ್ರಗಳ ಲಭ್ಯತೆಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ಪಡೆದು ಸಲಹೆ ಸೂಚನೆ ನೀಡಿದರು.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸ್ಥಾಯಿ ಸಮಿತಿ ಹಾಗೂ ಶಿಕ್ಷಣ ಸಚಿವಾಲಯದ ಸಲಹಾ ಸಮಿತಿ ಸದಸ್ಯರೂ ಆಗಿರುವ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ದಾವಣಗೆರೆ ಜಿಲ್ಲೆಯಲ್ಲಿ ಆರೋಗ್ಯ ಹಾಗೂ ಶಿಕ್ಷಣದ ಮೇಲಿನ ಯೋಜನೆಗಳು, ಮತ್ತು ನಿರುದ್ಯೋಗ ನಿವಾರಣಾ ಯೋಜನೆಗಳನ್ನು ಪರಿಣಾಮಕಾರಿ ರೀತಿಯಲ್ಲಿ ಜನತೆಗೆ ತಲುಪಿಸಲು ಪಿಡಿಒ ಅಧಿಕಾರಿಗಳಿಗೆ ಸಲಹೆ ನೀಡಿದರು.
ಇದರೊಂದಿಗೆ ಸರ್ಕಾರದಿಂದ ಅನುದಾನವನ್ನು ಸಮರ್ಪಕವಾಗಿ ಬಳಸುವಲ್ಲಿ ಮತ್ತು ಅವುಗಳ ಅಂಕಿಅಂಶ ಸಮರ್ಥವಾಗಿ ನಿರ್ವಹಿಸುವಂತೆ ಮಾರ್ಗದರ್ಶನ ನೀಡಿದರು.
ಗ್ರಾಮೀಣ ಜನರ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ತಮ್ಮ ಕಾರ್ಯಗಳ ಬಗ್ಗೆ ಪ್ರಗತಿ ವರದಿಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು. ಜೊತೆಗೆ ಸರಿಯಾದ ಮಾಹಿತಿಯನ್ನು ಹಂಚಿಕೊಳ್ಳುವುದು ಮುಖ್ಯ ಇದರಿಂದ ಅಭಿವೃದ್ಧಿ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತ್ವ ಕಾಪಾಡಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಸುರೇಶ್ ಇಟ್ನಾಳ್ ಉಪಸ್ಥಿತರಿದ್ದರು.