SUDDIKSHANA KANNADA NEWS/ DAVANAGERE/ DATE:29-10-2024
ದಾವಣಗೆರೆ: ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನು ವಕ್ಫ್ ಬೋರ್ಡ್ ನೊಟೀಸ್ ಕೊಟ್ಟ ವಿವಾದ ಭುಗಿಲೆದ್ದ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯ ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನಲ್ಲಿಯೂ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ಗೆ ನೀಡಲಾಗಿದ್ದು ಬೆಳಕಿಗೆ ಬಂದಿದೆ. ಮಾತ್ರವಲ್ಲ, ಈ ಸಂಬಂಧ ರೈತರಿಗೆ ನೊಟೀಸ್ ಸಹ ನೀಡಲಾಗಿದೆ.
ಹೊನ್ನಾಳಿ- ನ್ಯಾಮತಿ ಅವಳಿ ಕ್ಷೇತ್ರದಲ್ಲಿ ಅಕ್ರಮವಾಗಿ ವಕ್ಫ್ ಬೋರ್ಡ್ ಗೆ ಸರ್ಕಾರಿ ಜಾಗ ಹಾಗೂ ಗೋಮಾಳ ಜಮೀನನ್ನು ನೀಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಸುಂಕದಕಟ್ಟೆ ಗ್ರಾಮದ ಸರ್ವೇ ನಂಬರ್ 22 ರಲ್ಲಿರುವ 8
ಎಕರೆ 11 ಗುಂಟೆ ವಕ್ಫ್ ಬೋರ್ಡ್ ಗೆ ನೀಡಿದ್ದು ಗ್ರಾಮಸ್ಥರ ಕಣ್ಣು ಕೆಂಪಾಗಿಸಿದೆ.
ಇದೇ ರೀತಿ ಒಟ್ಟು ಹೊನ್ನಾಳಿ ತಾಲೂಕಿನಲ್ಲಿ ರಾಘವೇಂದ್ರ ಸ್ವಾಮಿ ಮಠದ ಅಕ್ಕಪಕ್ಕ ಹಾಗೂ ತುಂಗಭದ್ರಾ ಸೇತುವೆ ಪಕ್ಕದಲ್ಲಿ ಮತ್ತು ಸುಂಕದಕಟ್ಟೆ ಗ್ರಾಮದಲ್ಲಿ 70 ಎಕರೆ ವಕ್ಫ್ ಬೋರ್ಡ್ ಹೆಸರಿನಲ್ಲಿ ನಕಲಿ ದಾಖಲೆಯಲ್ಲಿ ಮೂಲಕ ಒತ್ತುವರಿ ಮಾಡಲಾಗಿದೆ ಈ ಕೂಡಲೇ ಈ ಕಾಂಗ್ರೆಸ್ ಸರ್ಕಾರವು ದಾಖಲೆಯನ್ನು ರದ್ದು ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರ ಹೆಚ್ಚಾಗಿದ್ದು, ಆರೋಪ ಪ್ರತ್ಯಾರೋಪ ಜೋರಾಗಿದೆ. ಈ ನಡುವೆ ಹೊನ್ನಾಳಿ – ನ್ಯಾಮತಿ ಅವಳಿ ಕ್ಷೇತ್ರದ ಸುಂಕದಕಟ್ಟೆ ಗ್ರಾಮದ ಸರ್ವೆೇ ನಂಬರ್
22 ರಲ್ಲಿರುವ 8 ಎಕರೆ 11 ಗುಂಟೆ ಜಮೀನನ್ನು ವಕ್ಫ್ ಬೋರ್ಡ್ ಗೆ ನೀಡಿದ್ದು, ಇದು ಗ್ರಾಮಸ್ಥರ ತೀವ್ರ ವಿರೋಧಕ್ಕೆ ಕಾರಣವಾಗಿದೆ.
ಸರ್ಕಾರಿ ಜಾಗ ಹಾಗೂ ಗೋಮಾಳ ಜಮೀನನನ್ನು ವಕ್ಫ್ ಬೋರ್ಡ್ ಗೆ ನೀಡಲಾಗಿದ್ದು, ಈ ಬಗ್ಗೆ ದಾಖಲಾತಿಗಳನ್ನು ಬಿಡುಗಡೆ ಮಾಡಲಾಗಿದೆ. ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ, ನ್ಯಾಮತಿ ಸೇರಿದಂತೆ ವಿವಿಧೆಡೆ ವಕ್ಫ್ ಬೋರ್ಡ್
ಜಮೀನನ್ನು ಜುಮ್ಮಾ ಮಸೀದಿಗೆ ನೀಡಲಾಗಿದೆ. ಇದು ರೈತರ ವಿರೋಧಕ್ಕೆ ಕಾರಣವಾಗಿದೆ.
ರೈತರು ತುಂಬಾ ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಕಂದಾಯವನ್ನೂ ಕಟ್ಟುತ್ತಿದ್ದಾರೆ. ಆದ್ರೆ, ಪಾಣಿಯಲ್ಲಿ ಜುಮ್ಮಾ ಮಸೀದಿಗೆ ನೀಡಿರುವುದು ರೈತರನ್ನು ಕೆರಳುವಂತೆ ಮಾಡಿದೆ. ಅದೇ ರೀತಿಯಲ್ಲಿ ಸಾಸ್ವೆಹಳ್ಳಿ ಸೇರಿದಂತೆ
ಹಲವೆಡೆ ಸರ್ಕಾರಿ ಜಮೀನು ಮತ್ತು ಬಗರ್ ಹುಕುಂ ಜಾಗ ನೀಡಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಸುಂಕದಕಟ್ಟೆ ಸರ್ವೆ ನಂಬರ್ 22ರಲ್ಲಿ ಜಮೀನು ನೀಡಲಾಗಿದೆ. ಒಂದೇ ಒಂದು ಮುಸ್ಲಿಂ ಸಮುದಾಯದ ಮನೆಗಳಿಲ್ಲ, ಮಸೀದಿ ಇಲ್ಲ. ಖಬರ್ ಸ್ತಾನ್ ಇಲ್ಲ. ಆದರೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ತಹಶೀಲ್ದಾರ್ ಒಬ್ಬರು 1989ರಲ್ಲಿ ಧರ್ಮಪ್ಪ ಎಂಬುವವರ ಹೆಸರಿಗೆ ನೋಂದಣಿ ಮಾಡಿಸಿ ಆ ಬಳಿಕ ವಕ್ಫ್ ಬೋರ್ಡ್ ಗೆ ಸೇರಿದ ಆಸ್ತಿ ಎಂದು ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ತುಂಗಾಭದ್ರಾ ನದಿ ಸೇತುವೆ ಅಕ್ಕಪಕ್ಕ 13 ಎಕರೆ ಭೂಮಿಯನ್ನು ವಕ್ಫ್ ಬೋರ್ಡ್ ಗೆ ನೀಡಲಾಗಿದೆ. ಒಂದು ಎಕರೆ ಭೂಮಿಗೆ 5 ರಿಂದ 6 ಕೋಟಿ ರೂಪಾಯಿ ಮೌಲ್ಯದ್ದು. ಒಟ್ಟು 60 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ರಾಘವೇಂದ್ರ ಮಠದ ಬಳಿ 12 ಎಕರೆ ಸೇರಿದಂತೆ ಸುಮಾರು 70 ಎಕರೆ ಭೂಮಿಯನ್ನು ವಕ್ಫ್ ಬೋರ್ಡ್ ಗೆ ನೀಡಿರುವುದು ಅಕ್ಷಮ್ಯ ಎಂಬುದು ರೈತರ ಆರೋಪ.