SUDDIKSHANA KANNADA NEWS/ DAVANAGERE/ DATE:09-01-2025
ದಾವಣಗೆರೆ: ನಗರದ ಹಳೇಕುಂದುವಾಡ ಶಿಬಾರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನೇರವಾಗಿ ಬ್ರಿಡ್ಜ್ ಮಾಡದೇ ಕೆಲಸ ಪ್ರಾರಂಭಿಸಿರುವುದಕ್ಕೆ ಹಳೇಕುಂದವಾಡ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಹೆದ್ದಾರಿ ಬಂದ್ ನಡೆಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಮುನ್ನೆಚ್ಚರಿಕಾ ಕ್ರಮವಾಗಿ 50 ಗ್ರಾಮಸ್ಥರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬ್ರಿಡ್ಜ್ ಗಾಗಿ ಆಗ್ರಹಿಸಿ ಹಳೇ ಕುಂದುವಾಡ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ ನಡೆಸಿದ್ದು, ರಸ್ತೆ ಮೇಲೆ ಮಲಗಿ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಮತ್ತೆ ಕೆಲವರು ಕುಳಿತು ಧರಣಿ ನಡೆಸಿದರು. ನೇರವಾದ ಬ್ರಿಡ್ಜ್ ಮಾಡುವಂತೆ ಆಗ್ರಹಿಸಿದರು. ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಅಧಿಕಾರಿಗಳು ಗ್ರಾಮಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೂ ಕೇಳಲಿಲ್ಲ. ಈ ವೇಳೆ ಮಾತಿನ ಚಕಮಕಿ ಜೋರಾ.ಯಿತು. ಪೊಲೀಸರು ಪರಿಸ್ಥಿತಿ ಕೈಮೀರುತ್ತಿರುವುದನ್ನು
ಅರಿತು ವಶಕ್ಕೆ ಪಡೆದರು.
ದಾವಣಗೆರೆ ನಗರದ ಹಳೇ ಕುಂದುವಾಡ ರಾಷ್ಟ್ರೀಯ ಹೆದ್ದಾರಿ ಬಳಿ ಸ್ಥಳಕ್ಕೆ ಆಗಮಿಸಿದ ಎಸಿ, ತಹಶೀಲ್ದಾರ್ ಗ್ರಾಮಸ್ಥರ ನಡುವೆ ವಾಗ್ವಾದ ನಡೆಸಿದರು. ಪ್ರತಿಭಟನೆ ಹಿಂಪಡೆಯದ ಹಿನ್ನಲೆಯಲ್ಲಿ ಗ್ರಾಮಸ್ಥರನ್ನು ವಶಕ್ಕೆ ಪಡೆದು ಪೊಲೀಸರು ಜೀಪಿನಲ್ಲಿ ಕೂರಿಸಿದರು.
ಕಳೆದ ಎರಡು ಬ್ರಿಡ್ಜ್ ಗಳನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ. ಎರಡು ಬ್ರಿಡ್ಜ್ ಹೊಡೆದು ಈಗ ಮತ್ತೆ ಅವೈಜ್ಞಾನಿಕ ಬ್ರಿಡ್ಜ್ ನಿರ್ಮಾಣ ಮಾಡಲಾಗ್ತಿದೆ. ಹಳೇ ಕುಂದುವಾಡ-ಬನ್ನಿಕೋಡ ಮಾರ್ಗಕ್ಕೆ ನೇರ ಬ್ರಿಡ್ಜ್ ನಿರ್ಮಾಣ ಮಾಡಬೇಕು ಎಂದು ಪಟ್ಟುಹಿಡಿದರು. ಹರಿಹರ ಶಿವಮೊಗ್ಗ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಈ ಹಿನ್ನಲೆಯಲ್ಲಿ 80ಅಡಿ ನೇರ ಬ್ರಿಡ್ಜ್ ಮಾಡುವಂತೆ ಒತ್ತಾಯಿಸಿದರು.
ಸ್ಥಳಕ್ಕೆ ಎಎಸ್ಪಿ ವಿಜಯಕುಮಾರ್ ಸಂತೋಷ್, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಆಗಮಿಸಿದರು. ಗ್ರಾಮಸ್ಥರು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಯಿತು.