SUDDIKSHANA KANNADA NEWS/ DAVANAGERE/ DATE:02-04-2025
ದಾವಣಗೆರೆ: ಸಿಬ್ಬಂದಿ ಕೊರತೆ ಸೇರಿದಂತೆ ಉನ್ನತ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಿ, ಉತ್ತಮ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಭರವಸೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳ ಸಮಸ್ಯೆ ಮತ್ತು ಪರಿಹಾರ ಅಧ್ಯಯನಕ್ಕಾಗಿ ಉಪಸಮಿತಿ ರಚಿಸಲಾಗಿದೆ. ಸಮಿತಿಯು ಸದ್ಯದಲ್ಲಿಯೇ ವರದಿ ಸಲ್ಲಿಸಲಿದ್ದು, ಸಂಪುಟ ಸಭೆಯಲ್ಲಿ ಚರ್ಚಿಸಿ ವರದಿಯನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಹಲವು ಸವಾಲುಗಳಿವೆ. ಭವಿಷ್ಯದ ಬೆಳವಣಿಗೆಗೆ ಭದ್ರ ಬುನಾದಿ ಹಾಕಬೇಕಾಗಿದೆ. ಉನ್ನತ ಶಿಕ್ಷಣದಲ್ಲೂ ಕೃತಕ ಬುದ್ಧಿಮತ್ತೆಯ ಲಭ್ಯತೆ, ಸೌಲಭ್ಯವನ್ನು ಬಳಕೆ ಮಾಡಿಕೊಳ್ಳುವತ್ತ ಸಂಶೋಧನೆ ಆಗಬೇಕಾಗಿದೆ ಎಂದರು.
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಒಟ್ಟು 4800ಕ್ಕೂ ಹೆಚ್ಚು ಅನುಮೋದಿತ ಬೋಧಕ ಸಿಬ್ಬಂದಿ ಹುದ್ದೆಗಳಿದ್ದು, ಅದರಲ್ಲಿ ಸುಮಾರು 3500ಕ್ಕೂ ಖಾಲಿ ಇವೆ. ಅವುಗಳ ಭರ್ತಿಗೆ ಆದ್ಯತೆ ನೀಡಬೇಕಾಗಿದೆ. ನೇಮಕಾತಿ ಜೊತೆಗೆ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಶಿಕ್ಷಣ ನೀತಿಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾಗಿದೆ ಎಂದರು.
ವಿಶ್ವವಿದ್ಯಾಲಯಗಳನ್ನು ಹೆಚ್ಚಿಸುವುದಿಂದ ಶೈಕ್ಷಣಿಕ ವಾತಾವರಣ ಬದಲಾಗುವುದಿಲ್ಲ. ಬಡವರಿಗೆ ಸರ್ಕಾರದ ವಿಶ್ವವಿದ್ಯಾಲಯಗಳ ಉನ್ನತ ಶಿಕ್ಷಣದ ಆಶಯ ಈಡೇರಬೇಕು. ಆರ್ಥಿಕವಾಗಿ ವಿಶ್ವವಿದ್ಯಾಲಯಗಳು ಬಲಗೊಳ್ಳಬೇಕು. ಹೊಸ ವಿಶ್ವವಿದ್ಯಾಲಯದಿಂದ ಈ ಆಶಯ ಈಡೇರುತ್ತದೆ ಎಂಬುದನ್ನು ನಿರೀಕ್ಷಿಸಲಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾನ್ಯತೆ ಸಿಗುವಂತೆ ಮಾಡಲು ವಿಶ್ವವಿದ್ಯಾಲಯಗಳ ಮೌಲ್ಯವನ್ನು ಹೆಚ್ಚಿಸಲು ಗಮನ ನೀಡುವುದು ಮುಖ್ಯವಾಗಿದೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.