SUDDIKSHANA KANNADA NEWS/ DAVANAGERE/ DATE:15-04-2025
ಬೆಂಗಳೂರು: ಮುಸ್ಲಿಂ ಸಮುದಾಯದ ಹಿತರಕ್ಷಣೆಗಾಗಿಯೇ ತಲಾಖ್ ನಿಷೇಧ ಮಾಡಿದ್ದೇವೆ, ವಕ್ಪ್ ಕಾಯ್ದೆಗೆ ತಿದ್ದುಪಡಿ ಮಾಡಿದ್ದೇವೆ ಎಂದು ಒಂದೆಡೆ ತಮ್ಮನ್ನು ಮುಸ್ಲಿಂ ಸಮುದಾಯದ ಸುಧಾರಕರಂತೆ ತಮ್ಮನ್ನು ಬಿಂಬಿಸಿಕೊಳ್ಳುತ್ತಿರುವ ನರೇಂದ್ರ ಮೋದಿ ಅವರು ಇನ್ನೊಂದೆಡೆ ಬಜರಂಗ ದಳದ ಕಾರ್ಯಕರ್ತನಂತೆ ಕೋಮುದ್ವೇಷವನ್ನು ಉಗುಳುತ್ತಿರುವುದು ಅವರು ಕೂತಿರುವ ಕುರ್ಚಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಕ್ಪ್ ಬೋರ್ಡಿನಲ್ಲಿ ಮುಸ್ಲಿಂಮೇತರರನ್ನು ಕಡ್ಡಾಯವಾಗಿ ಸದಸ್ಯರನ್ನಾಗಿ ಮಾಡುವ ತಿದ್ದುಪಡಿ ಕೋಮುದ್ವೇಷದಿಂದ ಕೂಡಿರುವುದು ಮೇಲ್ನೋಟದಲ್ಲಿಯೇ ಸಾಬೀತಾಗುತ್ತದೆ. ಇದೇ ಮಾನದಂಡವನ್ನು ಮುಂದಿನ ದಿನಗಳಲ್ಲಿ ಹಿಂದೂ ಮಠ-ಮಂದಿರಗಳಿಗೂ ವಿಸ್ತರಿಸಬೇಕೆಂಬ ಬೇಡಿಕೆ ಹುಟ್ಟಿಕೊಂಡರೆ ಸಮಾಜದಲ್ಲಿ ಅನವಶ್ಯಕವಾಗಿ ಧರ್ಮ-ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವುದಿಲ್ಲವೇ? ದೇಶದ ಪ್ರಧಾನಿಯಾದವರು ಇಂತಹ ಸಂಘರ್ಷಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕೇ ಹೊರತು ಹುಟ್ಟುಹಾಕುವುದಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.
ಕರ್ನಾಟಕದಲ್ಲಿ ದಲಿತರ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಂಮರಿಗೆ ನೀಡಲಾಗಿದೆ ಎನ್ನುವ ಇನ್ನೊಂದು ಸುಳ್ಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇಂತಹ ಆಧಾರ-ತಲೆಬುಡ ಇಲ್ಲದ ಆರೋಪಗಳನ್ನು ಮಾಡುವಾಗ ಪ್ರಧಾನಿಯವರು ಕನಿಷ್ಠ ವಾಸ್ತವಾಂಶಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನಾದರೂ ಮಾಡಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆಯೇ ಹೊರತು ಕಡಿಮೆ ಮಾಡಿಲ್ಲ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ಶಿಫಾರಸಿನ ಆಧಾರದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇಕಡಾ 15ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡಾ ಮೂರರಿಂದ ಏಳಕ್ಕೆ ಹೆಚ್ಚಿಸಲಾಗಿದೆ. ಹೀಗಿರುವಾಗ ಅವರಿಂದ ಕಿತ್ತುಕೊಳ್ಳುವುದೇನು ಬಂತು? ಇಂತಹ ಮೂಲಭೂತ ಮಾಹಿತಿಯೂ ಇಲ್ಲದ ಪ್ರಧಾನಿ ಮೋದಿಯವರು ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ತಮ್ಮ ಘನತೆಯನ್ನು ತಾವೇ ಹಾಳುಗೆಡಹುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.