SUDDIKSHANA KANNADA NEWS/ DAVANAGERE/ DATE:23-11-2024
ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವನ್ನು ಜನರು ಮೆಚ್ಚಿದ್ದಾರೆ, ಐದು ಗ್ಯಾರಂಟಿಗಳನ್ನು ನೀಡಿದ ನಮ್ಮ ಸರ್ಕಾರಕ್ಕೆ ಜನರು ಬೆಂಬಲ ನೀಡಿ ಮೂರು ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ ಎಂದು ಚನ್ನಗಿರಿ ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದ್ದಾರೆ.
ಚುನಾವಣೆ ಪೂರ್ವದಲ್ಲೇ ನಾನು ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ತಿಳಿಸಿದ್ದೆ. ಅದರಂತೆ ಎಲ್ಲಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೋಡೆತ್ತಿನಂತ ಹೋರಾಟದ ಪ್ರತಿಫಲವೇ ಈ ಚುನಾವಣೆ ಫಲಿತಾಂಶ ಎಂದು ವ್ಯಾಖ್ಯಾನಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನ ಸೋಲಿಸಲು ಬಿಜೆಪಿ ಸಾಕಷ್ಟು ಆರೋಪಗಳನ್ನು ಮಾಡಿತು. ಜನರು ಮಾತ್ರ ಯಾವುದಕ್ಕೂ ಕಿವಿಗೊಡಲಿಲ್ಲ. ಐದು ಗ್ಯಾರಂಟಿಗಳನ್ನು ನೀಡಿ ನುಡಿದಂತೆ ನಡೆದ ನಮ್ಮ ಸರ್ಕಾರದ ಆಡಳಿತಕ್ಕೆ ಕರ್ನಾಟಕದ ಜನರು ಆಶೀರ್ವಾದ ಮಾಡಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಅವರ ಪರವಾಗಿ ಇದ್ದೇವೆ ಎಂದು ಅಲ್ಲಿನ ಜನ ಬೆಂಬಲ ಸೂಚಿಸಿ ಸಿ.ಪಿ ಯೋಗೇಶ್ವರ್ ಅವರನ್ನ ಗೆಲ್ಲಿಸಿದ್ದಾರೆ ಎಂದಿದ್ದಾರೆ.
ಇನ್ನೂ ಶಿಗ್ಗಾಂವ ಚುನಾವಣೆಯಲ್ಲೂ ಜನರು ಎನ್‍ಡಿಎ ಮೈತ್ರಿಕೂಟಕ್ಕೆ ಸೋಲುಣಿಸಿ ಬಿಸಿ ಮುಟ್ಟಿಸಿದ್ದಾರೆ, ಉಳಿದಂತೆ ಸಂಡೂರು ಕ್ಷೇತ್ರದಲ್ಲೂ ನಮ್ಮ ಪಕ್ಷಕ್ಕೆ ಬೆಂಬಲ ನೀಡಿ ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷ ಎಂದು ಸಾಬೀತು ಮಾಡಿದ್ದಾರೆ. ನಾನು ಸಹ ಶಿಗ್ಗಾಂವ ಕ್ಷೇತ್ರದ ಶಿಶುವಿನಹಾಳು ಗ್ರಾಮ ಪಂಚಾಯ್ತಿ ಜವಾಬ್ದಾರಿ ಹೊತ್ತುಕೊಂಡು ಪಕ್ಷದ ಪರವಾಗಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದ್ದೇ, ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಕಾರ್ಯಕರ್ತರು ಪಟ್ಟ ಶ್ರಮದಿಂದ ಗೆಲುವು ಸಾಧಿಸಿದ್ದೇವೆ, ಈ ಗೆಲುವು ಪಕ್ಷದ ಕಾರ್ಯಕರ್ತರಿಗೆ ಸಲ್ಲುತ್ತದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ, ಉಳಿದ ಅಧಿಕಾರಾವಧಿಯಲ್ಲಿ ನಮ್ಮ ಸರ್ಕಾರ ಇನ್ನೂ ಉತ್ತಮ ಆಡಳಿತ ನೀಡುವ ಮೂಲಕ ಎನ್‍ಡಿಎ ಮೈತ್ರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಅಭಿಪ್ರಾಯಪಟ್ಟಿದ್ದಾರೆ.