SUDDIKSHANA KANNADA NEWS/ DAVANAGERE/ DATE:07-01-2025
ದಾವಣಗೆರೆ: ರೈತರು, ಜನರಿಗೆ ನ್ಯಾಯ ಕೊಡಿಸಬೇಕೆಂದು ನನ್ನನ್ನು ಆಯ್ಕೆ ಮಾಡಿದ್ದಾರೆ. ರೈತರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗದಿದ್ದರೆ ಇರಬೇಕಾ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಪ್ರಶ್ನಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಎದುರು ಚನ್ನಗಿರಿ ತಾಲೂಕಿನ ನಲ್ಲೂರು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ನಕಲಿ ಮತದಾರರ ಪಟ್ಟಿ ಅಂಗೀಕರಿಸಲಾಗಿದೆ ಎಂದು ಆರೋಪಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮತದಾರರ ಪಟ್ಟಿ ಸಮರ್ಪಕವಾಗಿಲ್ಲ. ಈ ಬಗ್ಗೆ ಜಿಲ್ಲಾ ನೊಂದಣಾಧಿಕಾರಿಗಳು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕೃಷಿ ಸಹಕಾರ ಸಂಘದಲ್ಲಿನ ಅವ್ಯವಹಾರ, ಮತದಾರರ ಪಟ್ಟಿಯಲ್ಲಿನ ಲೋಪ ಸೇರಿದಂತೆ ಎಲ್ಲಾ ವಿಚಾರಗಳ ಕುರಿತಂತೆ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಳ್ಳದಿದ್ದರೆ ಏನು ಮಾಡಬೇಕು? ಹಾಗಾಗಿ, ರೈತರೊಟ್ಟಿಗೆ ಪ್ರತಿಭಟನೆಗೆ ಬಂದಿದ್ದೇನೆ. ನಲ್ಲೂರು ಕೃಷಿ ಪತ್ತಿನ ಸಹಕಾರ ಸಂಘ ಸೂಪರ್ ಸೀಡ್ ಆಗಲೇಬೇಕು. ಅಲ್ಲಿಯವರೆಗೆ ಹೋರಾಟ ನಿಲ್ಲದು ಎಂದು ಎಚ್ಚರಿಕೆ ನೀಡಿದರು.
ಒಂದು ಎಕರೆ ಹೊಂದಿರುವ ರೈತರಿಗೆ 10 ಸಾವಿರ ರೂಪಾಯಿ ಸಾಲ ಮಾಡಿದ್ದರೆ, ಮತ್ತೆ ಕೆಲ ರೈತರಿಗೆ 1 ಲಕ್ಷ ರೂಪಾಯಿಯವರೆಗೆ ಸಾಲ ನೀಡಲಾಗಿದೆ. ಪ್ರಶ್ನೆ ಮಾಡಲು ಹೋದರೆ ದಬ್ಬಾಳಿಕೆ, ರೌಡಿಸಂ ಮಾಡಲಾಗುತ್ತಿದೆ. ರೈತರ ಪರ ನಿಲ್ಲುತ್ತೇನೆ. ಅಂತ್ಯ ಕಾಣುವವರೆಗೆ ವಿರಮಿಸಲ್ಲ ಎಂದು ಶಿವಗಂಗಾ ಬಸವರಾಜ್ ಗುಡುಗಿದರು.