SUDDIKSHANA KANNADA NEWS/ DAVANAGERE/ DATE:31-10-2024
ದಾವಣಗೆರೆ: ಕಟ್ಟಡ ಎಷ್ಟು ಚದುರ ಅಡಿ ಇದೆ ಎಂಬುದು ಗೊತ್ತಿಲ್ಲ. ಕಟ್ಟಡದೊಳಗೆ ಏನೇನು ಮೂಲಭೂತ ಸೌಲಭ್ಯ ಕಲ್ಪಿಸಿದ್ದಾರೆ ಎಂಬ ಮಾಹಿತಿ ಇಲ್ಲ. ಆಗಿದ್ದರೆ ಈ ಕಟ್ಟಡ ಎಷ್ಟು ವರ್ಷ ಬಾಳಿಕೆ ಬರುತ್ತದೆ ಎಂಬುದು ಆ ದೇವರೇ ಬಲ್ಲ.!
ಇದು, ಆರೋಗ್ಯ ಉಪ ಕೇಂದ್ರ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಗುತ್ತಿಗೆದಾರ ಮತ್ತು ಇಂಜಿನಿಯರ್ ತರಾಟೆಗೆ ತೆಗೆದುಕೊಂಡ ಸಂದರ್ಭ.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹರಲೀಪುರ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದಿಂದ 18.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ನೂತನ ಆರೋಗ್ಯ ಉಪ ಕೇಂದ್ರವನ್ನು ಶಾಸಕ ಕೆ.ಎಸ್.ಬಸವಂತಪ್ಪ, ಮಾಜಿ ಶಾಸಕ ಪ್ರೊ.ಲಿಂಗಣ್ಣಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕೆ.ಎಸ್.ಬಸವಂತಪ್ಪ, ಹಳ್ಳಿ ಜನರಿಗೆ ಇರುವ ಸಾಮಾನ್ಯ ಜ್ಞಾನ ಅಧಿಕಾರಿಗಳಿಗೆ ಇಲ್ಲ. ಇಲ್ಲಿರುವ ಯಾರನ್ನೇ ಕೇಳಿದರೂ ಈ ಕಟ್ಟಡ ಎಷ್ಟು ಚದುರ ಅಡಿ ಇದೆ, ಈ ಕಟ್ಟಡಕ್ಕೆ ಎಷ್ಟೆಷ್ಟು ಪ್ರಮಾಣದಲ್ಲಿ ಕಟ್ಟಡ ಸಾಮಗ್ರಿ ಬಳಕೆ ಮಾಡಿದ್ದಾರೆ, ಕಟ್ಟಡದ ಅಂದಾಜು ವೆಚ್ಚ ಕೇಳಿದರೆ ಕಣ್ಣು ಮುಚ್ಚಿಕೊಂಡು ಹೇಳುತ್ತಾರೆ. ಆದರೆ ಅದೇ ಗುತ್ತಿಗೆದಾರ ಮತ್ತು ಅಧಿಕಾರಿಗಳನ್ನು ಕೇಳಿದರೆ ತಡವರಿಸುತ್ತಾರೆ. ನೋಡಿ ಶಿಕ್ಷಣ ಇಲ್ಲದ ಹಳ್ಳಿ ಜನರಿಗೂ, ಪದವಿ ಪಡೆದ ಅಧಿಕಾರಿಗಳು ಎಷ್ಷು ವ್ಯತ್ಯಾಸ ಇದೆ ಎಂದು ಗೊತ್ತಾಗುತ್ತದೆ ಎಂದು ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಗರಂ ಆದರು.
ಈ ಹಿಂದೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕಳಪೆ ಕಾಮಗಾರಿ ಕಂಡು ಬಂದಿತ್ತು. ಕೂಡಲೇ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರ ಮತ್ತು ಸಂಬಂಧಪಟ್ಟ ಇಂಜಿನಿಯರ್ ಗೆ ತಾಕೀತು ಮಾಡಿದ್ದೆ. ಆದರೂ ಈ ಕಟ್ಟಡ ನೋಡಿದರೆ ಮೂಲ ಸೌಲಭ್ಯ ಕಲ್ಪಿಸದಿರುವುದು ಗ್ರಾಮಸ್ಥರಲ್ಲಿ ಸಂಶಯ ಮೂಡಿದೆ. ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಹೇಳುವವರೂ, ಕೇಳುವವರೂ ಯಾರು ಇಲ್ಲದಂತೆ, ಕೆಲವೊಬ್ಬರ ಕೈಗೊಂಬೆಯಾಗಿ ವರ್ತನೆ ಮಾಡುತ್ತಾರೆ. ಇವರಿಗೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸರಿಯಾದ ಪಾಠ ಕಲಿಸುತ್ತೇನೆ ಎಂದು ವೇದಿಕೆಯಲ್ಲೇ ಎಚ್ಚರಿಕೆ ನೀಡಿದರು.
ಸತತವಾಗಿ ಸುರಿದ ಮಳೆಯಿಂದಾಗಿ ನನ್ನ ಕ್ಷೇತ್ರದ ಬಹುತೇಕ ರಸ್ತೆಗಳಲ್ಲಿ ವಾಹನಗಳು ಸಂಚರಿಸದಂತಹ ರೀತಿಯಲ್ಲಿ ಹಾಳಾಗಿವೆ. ಹೀಗಾಗಿ ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ. ನೀವು ಮಾಡುವ ಅಭಿವೃದ್ಧಿ ಕೆಲಸಗಳು ಶಾಶ್ವತವಾಗಿ ಉಳಿದು ಜನರು ಮಾತನಾಡುವಂತಿರಬೇಕೆಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದ ಶಾಸಕರು, ಮಾಜಿ ಶಾಸಕ ಪ್ರೊ.ಲಿಂಗಣ್ಣ ಅವರ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ನಾನು ಕೂಡ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟದಿಂದ ವಿದ್ಯಾರ್ಥಿಗಳು, ಮಹಿಳೆಯರು, ಯುವಕರು ಕುಡಿತದ ದಾಸರಾಗಿ ಬಡ ಕುಟುಂಬಗಳು ಬೀದಿ ಪಾಲಾಗುತ್ತಿವೆ ಎಂಬ ದೂರುಗಳು ಸರ್ವೇ ಸಾಮಾನ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಆಯಾ ಗ್ರಾಮಗಳಲ್ಲಿ ಮದ್ಯಪಾನ ಮುಕ್ತ ಗ್ರಾಮಕ್ಕೆ ಗ್ರಾಮದ ಮುಖಂಡರು ಶಪತ ಮಾಡಬೇಕೆಂದು ಹರಲೀಪುರ ಗ್ರಾಮದ ಮುಖಂಡರಿಗೆ ವಾಗ್ದಾನ ಮಾಡಿಸಿದರು.
ಮಾಜಿ ಶಾಸಕ ಪ್ರೊ.ಲಿಂಗಣ್ಣ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರದ ಉಪಕೇಂದ್ರ ಮಂಜೂರು ಮಾಡಿಸಿದ್ದೆ. ಜತೆಗೆ ಸಾಕಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ಇನ್ನು ಹೆಚ್ಚಿನ ಅನುದಾನ ತರುವ ಮೂಲಕ ಈಗಿನ ಶಾಸಕರು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾಕ್ಷಿ ರವಿಕುಮಾರ್, ತಾಲೂಕು ಪಂಚಾಯಿತಿ ಸದಸ್ಯರಾದ ಸತೀಶ್ ಪಟೇಲ್, ಬೆಳಲಗೆರೆ ಹನುಮಂತಪ್ಪ ,ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಮೂರ್ತಿ, ಧರ್ಮೇಂದ್ರ , ತಾಲೂಕು ಆರೋಗ್ಯ ಅಧಿಕಾರಿಗಳು, ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.