SUDDIKSHANA KANNADA NEWS/ DAVANAGERE/ DATE:13-02-2024
ದಾವಣಗೆರೆ: ಮಾರ್ಚ್ 19 ಮತ್ತು 20ರಂದು ದಾವಣಗೆರೆ ಶಕ್ತಿ ದೇವತೆ ಶ್ರೀ ದುರ್ಗಾಂಬಿಕಾ ತಾಯಿ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನೆರವೇರಲಿದ್ದು, ಎಲ್ಲಾ ವಾರ್ಡ್ ಗಳಲ್ಲಿಯೂ ಸ್ವಚ್ಚತೆ ಕಾಪಾಡುವಂತೆ ಪಾಲಿಕೆ ಸದಸ್ಯರು, ಆಯುಕ್ತರು, ಮೇಯರ್ ಹಾಗೂ ಉಪಮೇಯರ್ ಗೆ ಸೂಚನೆ ನೀಡಲಾಗಿದೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಜಾತ್ರೆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕೆಲಸ ಶುರುವಾಗಿದೆ. ದುರ್ಗಾಂಬಿಕಾ ದೇವಸ್ಥಾನದಲ್ಲಿ ಹಂದರಗಂಬ ಪೂಜೆ ನೆರವೇರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ದೊರೆತ ಬಳಿಕ ಮಾಧ್ಯಮದವರ ಜೊತೆ ಅವರು ಮಾತನಾಡಿದರು.
ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ದುರ್ಗಾಂಬಿಕಾ ತಾಯಿ ಮಹೋತ್ಸವ. ಈ ಜಾತ್ರಾ ಮಹೋತ್ಸವಕ್ಕೆ ಬಹಳ ಜನರು ಬರುತ್ತಾರೆ. ನಗರ ಸಂಪೂರ್ಣವಾಗಿ ಸ್ವಚ್ಚವಾಗಿಡಬೇಕು. ಪಾಲಿಕೆಯವರಿಗೆ ಸೂಚನೆ ನೀಡಲಾಗಿದೆ. ಪಾಲಿಕೆ ಸದಸ್ಯರಿಗೂ ಹೇಳಿದ್ದೇವೆ. ಮೇಯರ್, ಉಪಮೇಯರ್ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ಹಳೇ ಭಾಗದ ಮನೆ ಮನೆ, ಗ್ರಾಮ ಗ್ರಾಮಗಳಲ್ಲಿಯೂ ಹಬ್ಬದ ರಂಗು ಹೆಚ್ಚಾಗಿರುತ್ತದೆ. ಹೊಸ ಭಾಗದಲ್ಲಿ ಉತ್ಸುಹಕರಾಗಿ ಜನರು ಆಚರಿಸುತ್ತಾರೆ. ಹಳೇ ದಾವಣಗೆರೆಯು ಜಾತ್ರೆ ಅಂದ್ರೆ ಹಿಂಗಿರಬೇಕು ಎಂದು ತೋರಿಸಿಕೊಡುತ್ತದೆ. ಅಷ್ಟು ಸಂಭ್ರಮ ಅಲ್ಲಿ ಮನೆ ಮಾಡಿರುತ್ತದೆ. ಪ್ರತಿಯೊಂದು ಗ್ರಾಮದಲ್ಲಿಯೂ ಬೀಗರು, ನೆಂಟರಿಷ್ಟರು ಬಂದಿರುತ್ತಾರೆ. ಏಪ್ರಿಲ್ 2 ರವರೆಗೆ ಹಬ್ಬದ ವಾತಾವರಣವೂ ಇರುತ್ತೆ. ಮಾಧ್ಯಮದವರ ಸಹಕಾರವೂ ಮುಖ್ಯ. ಎಲ್ಲರ ಸಹಕಾರದಿಂದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ
ಹಾಗೂ ಅಚ್ಚುಕಟ್ಟಾಗಿ ನೆರವೇರಿಸೋಣ ಎಂದು ಹೇಳಿದರು.
ದುರ್ಗಾಂಬಿಕಾ ಜಾತ್ರೆಯು ಹಳೆಯ ಸಂಪ್ರದಾಯದಂತೆ ನೆರವೇರಲಿದೆ. ಪೂಜೆ ಪುನಸ್ಕಾರಎಂದಿನಂತಿರಲಿದೆ. ಬೀದಿಯಲ್ಲಿ ಗೌಡ್ರು, ಶಾನಭೋಗರು, ರೈತರು ಎಲ್ಲರೂ ಆಗಮಿಸುತ್ತಾರೆ. ಗಾಂಧಿನಗರದಿಂದ ಎಲ್ಲಾ ಜಾತಿ ಜನಾಂಗದವರು ಉತ್ಸುಹಕರಾಗಿ ಪಾಲ್ಗೊಳ್ಳುತ್ತಾರೆ. ಪ್ರತಿಯೊಂದು ಸಮಾಜದದವರೂ ಸಹ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಾರೆ. ಹರಕೆ ಹೊತ್ತಿರುವವರು ಅದನ್ನು ತೀರಿಸುತ್ತಾರೆ. ಮಾತ್ರವಲ್ಲ, ಪ್ರತಿಯೊಬ್ಬರಿಗೂ ಜವಾಬ್ದಾರಿ ವಹಿಸಲಾಗಿರುತ್ತದೆ. ಅದನ್ನು ನೆರವೇರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು
ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.
ಈ ವೇಳೆ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷರೂ ಆದ ಶಾಸಕ ಶಾಮನೂರು ಶಿವಶಂಕರಪ್ಪ, ಡಾ. ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ನೂರಾರು ಮಂದಿ ಹಾಜರಿದ್ದರು.
ಹಂದರಗಂಬಕ್ಕೆ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್, ಸಮರ್ಥ್ ಶಾಮನೂರು ಪೂಜೆ ಸಲ್ಲಿಸಿದರು. ಪ್ರಭಾ ಮಲ್ಲಿಕಾರ್ಜುನ್ ಅವರು ಆರತಿ ಬೆಳಗಿ ನಮಿಸಿದರು.