SUDDIKSHANA KANNADA NEWS/ DAVANAGERE/ DATE:20-02-2025
ದಾವಣಗೆರೆ: ಮೈಕ್ರೋ ಫೈನಾನ್ಸ್ ಹಾವಳಿಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಜೊತೆಗೆ ಯಾವುದೇ ಕಾರಣಕ್ಕೂ ರೈತರು, ಮಹಿಳೆಯರು, ಸಾಲ ಪಡೆದವರಿಗೆ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಲಾಗಿದೆ.
ಕಿರುಕುಳ ತಡೆಗೆ ಸಾಕಷ್ಟು ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಆದ್ರೆ, ಮೈಕ್ರೋ ಸಿಬ್ಬಂದಿಗಳ ಟಾರ್ಚರ್ ಕಡಿಮೆ ಆದಂತೆ ಕಾಣುತ್ತಿಲ್ಲ. ಆದ್ರೆ, ಚನ್ನಗಿರಿ ತಾಲೂಕಿನ ಶಿವಗಂಗಾಳ ಗ್ರಾಮದಲ್ಲಿ ರೈತರು ಮನೆ ಖಾಲಿ ಮಾಡಿದ್ದಾರೆ. ಯಾಕೆಂದರೆ ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದಿದ್ದರು. ರೈತರು ಬೆಳೆ ಬಾರದೇ ಸಾಲದ ಸುಳಿಗೆ ಸಿಲುಕಿದ್ದರು. ಆದರೂ ಮೈಕ್ರೋ ಸಿಬ್ಬಂದಿಗಳು ಮನೆಗೆ ಬಂದು ಹಣ ಪಾವತಿ ಮಾಡುವಂತೆ ಮೇಲಿಂದ ಮೇಲೆ ಟಾರ್ಚರ್ ಕೊಟ್ಟಿದ್ದರು.
ಇದರಿಂದ ಬೇಸತ್ತಿದ್ದ ರೈತರು ದಾರಿ ಕಾಣದಂತಾಗಿದ್ದರು. ಸಾಲ ಮರುಪಾವತಿ ಮಾಡುತ್ತೇವೆ, ಸಮಯಾವಕಾಶ ಕೇಳಿದರೂ ಸಿಬ್ಬಂದಿ ಮಾತ್ರ ಕ್ಯಾರೇ ಎಂದಿರಲಿಲ್ಲ. ನಿತ್ಯವೂ ಮನೆಗೆ ಬಂದು ಹಣ ಪಾವತಿ ಮಾಡಿ. ಇಲ್ಲದಿದ್ದರೆ ಮನೆ ಮಾರಾಟ ಮಾಡಿ. ಜಮೀನು ಮಾರಾಟ ಮಾಡಿಯಾದರೂ ಹಣ ಪಾವತಿಸಿ ಎಂದು ಬಲವಂತ ಮಾಡುತ್ತಿದ್ದರು ಎಂದು ರೈತರು ಆರೋಪಿಸಿದ್ದಾರೆ.
ರೈತರು ಮನೆಗಳಿಗೆ ಬೀಗ ಹಾಕಿ ಕಳೆದ ಐದಾರು ತಿಂಗಳ ಹಿಂದೆ ಮನೆ ಖಾಲಿ ಮಾಡಿದ ವಿಚಾರ ಹಾಗೂ ಇಂದು ಬೆಳಗ್ಗೆ 7.30 ಕ್ಕೆ ಚನ್ನಗಿರಿ ತಾಲೂಕು ಶಿವಗಂಗಾಳ ಗ್ರಾಮಕ್ಕೆ ಏಳರಿಂದ ಎಂಟು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಆಗಮಿಸಿ ರೈತರಿಗೆ
ಕಿರುಕುಳ ನೀಡುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚೇವನಹಳ್ಳಿ ಮಂಜುನಾಥ್ ಬಣದ ಚನ್ನಗಿರಿ ತಾಲೂಕು ಸಮಿತಿ ಸದಸ್ಯರು ಭೇಟಿ ನೀಡಿದರು.
ಈ ವೇಳೆ ಎಲ್ಲಾ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯ ಸರ್ಕಾರ ಈಗಾಗಲೇ ಸುಗ್ರೀವಾಜ್ಞೆ ಜಾರಿ ಮಾಡಿರುವ ಕಾನೂನನ್ನು ಪಾಲಿಸಬೇಕೆಂದು ಕೂಡಲೇ ತಾಲೂಕು ಆಡಳಿತವು ಸಂಬಂಧಪಟ್ಟ ಎಲ್ಲಾ ಫೈನಾನ್ಸ್ ಗಳಿಗೆ ಸೂಚಿಸಬೇಕು.
ಬಲವಂತದ ವಸೂಲಿ ನಿಲ್ಲಿಸಬೇಕೆಂದು ಆದೇಶ ಮಾಡಬೇಕು ಎಂದು ಆಗ್ರಹಿಸಲಾಯಿತು.
ಈ ವೇಳೆ ರೈತರಿಗೆ ಯಾವುದೇ ಫೈನಾನ್ಸ್ ನವರು ಬಂದು ಹಣ ಪಾವತಿ ಮಾಡುವಂತೆ ಕಿರುಕುಳ, ಬೆದರಿಕೆ ಹಾಕುತ್ತಿದ್ದರೆ ಗಮನಕ್ಕೆ ತನ್ನಿ. ಹೋರಾಟ ಮಾಡೋಣ. ನಿಮ್ಮ ಜೊತೆ ನಾವಿದ್ದೇವೆ. ಸರ್ಕಾರದ ಮಾರ್ಗಸೂಚಿಗಳನ್ನು ಫೈನಾನ್ಸ್ ನವರು ಪಾಲಿಸಬೇಕು. ಇಲ್ಲದಿದ್ದರೆ ಹೋರಾಟ ಉಗ್ರಗೊಳಿಸಬೇಕಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರವಿಕುಮಾರ ಯಲ್ಲೋದಹಳ್ಳಿ, ಪೀರ ನಾಯ್ಕ್, ಮಧುರನಾಯಕನಹಳ್ಳಿ ಪ್ರಭಾಕರ್, ಜಿಕೆಹಳ್ಳಿ ಆಂಜನೇಯ, ಗಾಣದಕಟ್ಟೆ ಈರಪ್ಪ, ಶಿವಗಂಗಾಳ ಮಂಜು, ಶಿವಗಂಗಾಳ ಪಾಂಡು ಮತ್ತಿತರರು ಹಾಜರಿದ್ದರು.