SUDDIKSHANA KANNADA NEWS/ DAVANAGERE/ DATE:14-03-2024
ದಾವಣಗೆರೆ: ತಾಯಿ ಮತ್ತು ಶಿಶು ಮರಣ ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ತಾಯಿ ಮತ್ತು ಶಿಶು ಮರಣದ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಪ್ರಸೂತಿ ತಜ್ಞರು, ವೈದ್ಯರು ಪ್ರಸವಕ್ಕೆ ಗರ್ಭಿಣಿಯರು ಆಸ್ಪತ್ರೆಗೆ ದಾಖಲಾದ ವೇಳೆ ತಕ್ಷಣ ತಪಾಸಣೆ ನಡೆಸಿ, ಅವರ ಆರೋಗ್ಯದ ಸ್ಥಿತಿ, ಗಂಭೀರತೆ ಬಗ್ಗೆ ಪರಿಶೀಲಿಸಿ ಏನಾದರೂ ಇದ್ದರೆ ಅದರ ಕುರಿತು ವಿವರವಾಗಿ ಕೇಸ್ ಶೀಟ್ನಲ್ಲಿ ದಾಖಲಿಸಬೇಕು ಹಾಗೂ ತಕ್ಷಣವೇ ಮುಂದಿನ ಚಿಕಿತ್ಸೆ ಕುರಿತು ಕ್ರಮವಹಿಸಬೇಕು ಎಂದರು.
ಗರ್ಭಿಣಿಯಾದಾಗ ಪೌಷ್ಟಿಕ ಆಹಾರ ಸೇವನೆಗೆ ಮಾಡುವಂತೆ ಅರಿವು ಮೂಡಿಸಬೇಕು. ಗರ್ಭಿಣಿ ಸ್ತ್ರೀಯರು ಮಾತೃಪೂರ್ಣ ಯೋಜನೆಯ ಸೌಲಭ್ಯ ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರು ಗಮನಿಸಬೇಕು. ಗರ್ಭಿಣಿ ಸ್ತ್ರೀಯರನ್ನು ಹೆರಿಗೆಗೆ ಆಸ್ಪತ್ರೆಗೆ ಕರೆದುಕೊಂಡು ಬರುವಲ್ಲಿ ಆಶಾ ಕಾರ್ಯಕರ್ತೆಯರು ಕಾಳಜಿ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರಸೂತಿ ವಿಭಾಗದ ವೈದ್ಯರು ಅವರ ಕೆಲಸದಲ್ಲಿ ಹಾಜರಿದ್ದು, ತಕ್ಷಣ ಗರ್ಭಿಣಿಯರನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ತಾಯಿ ಮರಣ ಪ್ರಮಾಣವನ್ನು ಕಡಿಮೆ ಮಾಡಬೇಕೆಂದರು.
ಹೆರಿಗೆ ಸಂದರ್ಭದಲ್ಲಿ ಅಗತ್ಯವಿರುವ ರಕ್ತ, ಮತ್ತಿತರ ಪೂರ್ವ ಸಿದ್ದತೆಗಳಿಗೆ ಹೆಚ್ಚಿನ ಗಮನ ಹರಿಸುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಿದ ಅವರು ಗರ್ಭಿಣಿಯರು ಹೆಚ್ಚಾಗಿ ಹೆರಿಗೆ ಸಂದರ್ಭದಲ್ಲಿ ಅತಿಯಾದ ಬಿ.ಪಿಯಿಂದ ಮರಣ ಹೊಂದಿರುವ ಕಾರಣ, ಅದರ ಕಡೆ ಹೆಚ್ಚು ಗಮನವಹಿಸಬೇಕು. ಜಿಲ್ಲೆಯಲ್ಲಿ ಅಕ್ಟೋಬರ್-2023 ರಿಂದ ಫೆಬ್ರವರಿ-2024 ರವರೆಗೆ ತಾಯಂದಿರ ಮರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ. ತಾಯಂದಿರ ಮರಣ ಪ್ರಮಾಣ ತಪ್ಪಿಸಬೇಕು. ರೋಗಿಗಳನ್ನು ಪರೀಕ್ಷೆ ಮಾಡಿ ತಾಯಿ ಕಾರ್ಡ್ನಲ್ಲಿ ರೋಗಿಗೆ ನೀಡಿದ ಔಷಧಿಗಳು, ತಪಾಸಣೆ ಮಾಡಿದ ವರದಿಯನ್ನು ತಪ್ಪದೇ ಆಸ್ಪತ್ರೆಗಳಲ್ಲಿನ ವೈದ್ಯರು ನಮೂದಿಸಬೇಕು. ವೈದ್ಯರು ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಗರ್ಭಿಣಿಯರ ಕಡೆ ಹೆಚ್ಚು ಗಮನವಹಿಸಬೇಕು ಎಂದು ಸೂಚಿಸಿದರು.
ಆರೋಗ್ಯ ಇಲಾಖೆಯ ಆರ್.ಸಿ.ಹೆಚ್ ಅಧಿಕಾರಿ ಡಾ; ರೇಣುಕಾರಾಧ್ಯ, ಡಿಹೆಚ್ಓ ಡಾ. ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ, ಆಶಾ ಕಾರ್ಯಕರ್ತೆಯರು ಹಾಗೂ ಉಪಸ್ಥಿತರಿದ್ದರು.