SUDDIKSHANA KANNADA NEWS/ DAVANAGERE/ DATE:23-10-2024
ಬೆಂಗಳೂರು: ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸು ಮಾಡಬೇಕೆಂಬ ಉದ್ದೇಶ ನಮ್ಮ ಸರ್ಕಾರದ್ದಾಗಿದೆ. ಈಗಾಗಲೇ ರಾಜ್ಯದ 22 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ 11 ಜಿಲ್ಲೆಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ತುಮಕೂರು, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ವಿಜಯಪುರ, ವಿಜಯನಗರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳು ತಲೆ ಎತ್ತಲಿವೆ. ಇದರಿಂದ ಅನುಕೂಲವಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಆದ್ರೆ, ಈ ನಿರ್ಧಾರಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ.
ಐಎಡಿಎಸ್ಒ ವಿರೋಧ:
ಕರ್ನಾಟಕ ರಾಜ್ಯ ಸರಕಾರವು ವೈದ್ಯಕೀಯ ಕಾಲೇಜುಗಳನ್ನು ಹೊಂದಿರದ ರಾಜ್ಯದ 11 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಹೊರಟಿದೆ. ಅಂದರೆ ಸರಕಾರಿ ಹಾಗೂ ಖಾಸಗಿಯವರ ತಲಾ ಶೇಕಡಾ 50% ಸಹಭಾಗಿತ್ವದಲ್ಲಿ ಈ ಕಾಲೇಜುಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದೆ. ಇದು ಸರಿಯಲ್ಲ ಎಂದು ದಾವಣಗೆರೆ ಐಎಡಿಎಸ್ಒ ಜಿಲ್ಲಾ ಘಟಕ ತಿಳಿಸಿದೆ.
ಪ್ರತಿಯೊಂದು ಜಿಲ್ಲೆಯಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಮೆಡಿಕಲ್ ಓದುವ ಅವಕಾಶ ನೀಡಬೇಕೆಂದು ಈ ಯೋಜನೆ ಮಾಡುತ್ತಿರುವುದಾಗಿ ಸರಕಾರ ಹೇಳುತ್ತಿದೆ. ಆದರೆ ಈಗಾಗಲೇ ಸಂಪೂರ್ಣವಾಗಿ ಸರಕಾರದ ಅಡಿಯಲ್ಲಿರುವ ಕಾಲೇಜುಗಳ ಫೀಸ್ ಗಳೇ ಗಗನಕ್ಕೇರಿದ್ದು, ಇನ್ನು ಖಾಸಗಿ ಸಹಭಾಗಿತ್ವದಿಂದ ಹೇಗೆ ಬಡ ವಿದ್ಯಾರ್ಥಿಗಳಿಗೆ ಮೆಡಿಕಲ್ ಶಿಕ್ಷಣ ಸಿಗಲು ಸಾಧ್ಯ? ಎಂದು ಪ್ರಶ್ನಿಸಿದೆ.
ಈಗಾಗಲೇ ದಕ್ಷಿಣ ಕನ್ನಡ, ದಾವಣಗೆರೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬಹುಕಾಲದಿಂದ ಸರಕಾರಿ ವೈದ್ಯಕೀಯ ಕಾಲೇಜು ಬೇಕು ಎಂಬ ಜನರ ಬೇಡಿಕೆ ಇದೆ. ಈ ನೀತಿಯ ಮೂಲಕ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸಿದ್ದೇ ಆದರೆ ಜನ ಸರಕಾರದಿಂದ ವಂಚಿತರಾಗುತ್ತಾರೆ. ಸರಕಾರ ಖಾಸಗಿಯವರ ಲಾಭಿಗೆ ಶರಣಾಗಿರುವುದನ್ನು ಇದು ತೋರಿಸುತ್ತದೆ ಎಂದು ಆರೋಪಿಸಿದೆ.
ಹೀಗಾಗಿ ಕೂಡಲೇ ಈ ನಿರ್ಧಾರವನ್ನು ಕೈಬಿಟ್ಟು ಸರಕಾರವೇ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ವಹಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಬೇಕೆಂದು ಎಐಡಿಎಸ್ಒ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದೆ.