SUDDIKSHANA KANNADA NEWS/ DAVANAGERE/ DATE:27-10-2023
ದಾವಣಗೆರೆ: ನಾಲ್ಕು ದಿಕ್ಕಿನಲ್ಲೂ ಆಪರೇಷನ್ ಕಮಲ ನಡೆಯುತ್ತಿದೆ. ಈಗಾಗಲೇ ಬಿಜೆಪಿಯವರು 50 ಶಾಸಕರ ಸಂಪರ್ಕ ಮಾಡಿದ್ದಾರೆ ಎಂದು ಹೇಳುವ ಮೂಲಕ ಮಂಡ್ಯ ಶಾಸಕ ರವಿಕುಮಾರ್ ಗಾಣಿಗ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ಆಪ್ತ ಸಹಾಯಕ ಸಂತೋಷ್ ಅವರಿಂದ ಈ ಕೆಲಸ ನಡೆಯುತ್ತಿದೆ ಎಂದು ಆರೋಪ ಮಾಡಿದ ಅವರು, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ನೀಡುವುದಾಗಿ ಬಿಜೆಪಿಯವರು ಆಮೀಷವೊಡ್ಡುತ್ತಿದ್ದಾರೆ. ಮೈಸೂರು ಮತ್ತು ಬೆಳಗಾವಿ ಭಾಗದ ಬಿಜೆಪಿ ನಾಯಕರು ಡಿಮ್ಯಾಂಡ್ ಇಡುತ್ತಿದ್ದಾರೆಯ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ನಮ್ಮ ಶಾಸಕ ಮಿತ್ರರೊಬ್ಬರನ್ನು ಸಂತೋಷ ಭೇಟಿ ಆಗಿದ್ದಾನೆ. ಯಾರು ಕಾಂಗ್ರೆಸ್ ಜೆಡಿಎಸ್ ನನ್ನು ತೆಗೆದ್ರೋ ಅದೇ ಟೀಂ ಮತ್ತೆ ಸಕ್ರಿಯವಾಗಿದೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೆಸರು ಪ್ರಸ್ತಾಪಿಸದೇ ಆರೋಪಿಸಿದರು.
ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ, ಬೆಳಗ್ಗೆ ಎದ್ದ ತಕ್ಷಣ ಕಾಂಗ್ರೆಸ್ ನವರನ್ನು ಹುಡುಕುವುದೇ ಕಾಯಕವಾಗಿಬಿಟ್ಟಿದೆ. ನಮ್ಮ ಶಾಸಕರ ಜೊತೆ ಮಾತನಾಡಿದ ಆಡಿಯೋ ಮತ್ತು ವಿಡಿಯೋ ಇದೆ. ಸಂದರ್ಭ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇವೆ. ಸ್ಪೆಷಲ್ ಫ್ಲೈಟ್ ಮಾಡ್ತೀವಿ, ಮಂತ್ರಿ ಮಾಡುತ್ತೀವಿ. ಅಮಿತ್ ಶಾ ಭೇಟಿ ಮಾಡಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅಮಿತ್ ಶಾ ಹೆಸರು ಹೇಳಿ ಆಸೆ ಹುಟ್ಟಿಸುವ ಕೆಲಸ ಮಾಡಲಾಗುತ್ತಿದೆ. 49 ಶಾಸಕರು ನಮ್ಮ ಕಡೆ ಇದ್ದಾರೆ. ನೀವು 50ನೇ ಶಾಸಕ ಅಂತಾ ಹೇಳ್ತಾರೆ. ನಾಲ್ಕು ದಿಕ್ಕುಗಳಿಂದಲೂ ಈ ಪ್ರಯತ್ನ ನಡೆಯುತ್ತಿದೆ. ಈ ವಿಚಾರ ಸಿಎಂ ಹಾಗೂ ಡಿಸಿಎಂ ಗಮನಕ್ಕೆ ತಂದಿದ್ದೇವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ಆದ್ರೆ ನಮ್ಮ ಶಾಸಕರು ಸಹ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಗಮನಕ್ಕೆ ತಂದಿದ್ದಾರೆ ಎಂದರು.
ಹುಲಿ ಉಗುರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಗ್ ಬಾಸ್ ನಲ್ಲಿದ್ದ ವರ್ತೂರು ಸಂತೋಷ ಅಮಾಯಕ ಹುಡುಗ. ಬಿಗ್ ಬಾಸ್ ಮನೆಯಲ್ಲಿ ಸಂತೋಷ ಹಿಡ್ಕೊಂಡ್ ಬಂದ ಹಾಗೇ ಉಳಿದವರನ್ನು ಹಿಡ್ಕೊಂಡ್ ಬರಬೇಕು. ಅಮಾಯಕರನ್ನು ಹಿಡಿದು ಒಳಗಡೆ ಹಾಕುವುದು ತಪ್ಪು. ಅವನೊಬ್ಬ ರೈತ. ಅವನಿಗೆ ಕಾನೂನು ಅರಿವು ಇತ್ತೋ ಇಲ್ಲವೋ ಗೊತ್ತಿಲ್ಲ. ಜಗ್ಗೇಶ್, ದರ್ಶನ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಉಳಿದವರನ್ನು ಅರೆಸ್ಟ್ ಮಾಡಿ. ರೈತರಿಗೊಂದು ನ್ಯಾಯ ಸೆಲೆಬ್ರಿಟಿಗೆ ಒಂದು ನ್ಯಾಯ ಆಗಬಾರದು ಎಂದು ಹೇಳಿದರು.