SUDDIKSHANA KANNADA NEWS/ DAVANAGERE/ DATE:26-02-2024
ದಾವಣಗೆರೆ: ಸಂಪಾಯಿತಲೇ ಪರಾಕ್… ಸಂಪಾಯಿತಲೇ ಪರಾಕ್… ಚಿನ್ನದ ಚೊಂಬು ಸಂಪಾಯಿತಲೇ ಪರಾಕ್ ಎಂಬ ಭವಿಷ್ಯವಾಣಿ ನುಡಿಯುತ್ತಿದ್ದಂತೆ ಲಕ್ಷಾಂತರ ಜನರು ಖುಷಿಪಟ್ಟರು.
ಪ್ರತಿವರ್ಷವೂ ವಿಜಯನಗರದ ಮೈಲಾರ ಲಿಂಗೇಶ್ವರದಲ್ಲಿ ನುಡಿಯುವ ಗೊರವಯ್ಯ ಕಾರ್ಣಿಕ ತುಂಬಾನೇ ಖ್ಯಾತಿ. ಇದುವರೆಗೆ ನುಡಿದ ಭವಿಷ್ಯ ವಾಣಿ ಸುಳ್ಳಾಗಿಲ್ಲ. ಈ ವರ್ಷ ಮಳೆ ಇಲ್ಲದೇ ಕಂಗೆಟ್ಟಿರುವ ರಾಜ್ಯದ ಜನರಿಗೆ ಸಿಹಿ ಸುದ್ದಿ ಸುಕ್ಕಿದೆ. ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಂದು ಗೊರವಯ್ಯನ ಕಾರ್ಣಿಕವನ್ನು ವಿಶ್ಲೇಷಿಸಲಾಗುತ್ತಿದೆ. ಲೋಕಸಭೆ ಚುನಾವಣೆಯು ಬರುತ್ತಿರುವುದರಿಂದ ಈ ಭವಿಷ್ಯವಾಣಿಯನ್ನು ಬಿಜೆಪಿಯವರು ಸಹ ಕಮಲ ಪಕ್ಷಕ್ಕೆ ಭರ್ಜರಿ ಜಯಭೇರಿ ಸಿಗುತ್ತದೆ ಎಂದು ವಿಶ್ಲೇಷಿಸುತ್ತಿದ್ದಾರೆ.
ವಿಜಯನಗರದ ಮೈಲಾರ ಲಿಂಗೇಶ್ವರದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸಿದ್ದರು. ದೈವವಾಣಿ ನುಡಿದ ರಾಮಪ್ಪ ಗೊರವಯ್ಯ ಅವರ ಚಿತ್ತ ನೆಟ್ಟಿತ್ತು. ಮುಗಿಲೆತ್ತರಕ್ಕೆ ಏರಿ ಇದ್ದಕ್ಕಿದ್ದಂತೆ ಎರಡು ಪದಗಳ ಭವಿಷ್ಯ ನುಡಿದ ಗೊರವಯ್ಯನ ನುಡಿಯಿಂದ ಎಲ್ಲರೂ ಸಂತೃಪ್ತಗೊಂಡರು. ಸಂಪಾಯಿತಲೇ ಪರಾಕ್.. ಸಂಪಾಯಿತಲೇ ಪರಾಕ್… ಎನ್ನುತ್ತಿದ್ದಂತೆ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಜನರು ಸಹ ಸಂಪಾಯಿತಲೇ ಪರಾಕ್… ಸಂಪಾಯಿತಲೇ ಪರಾಕ್ ಎನ್ನುವ ಮೂಲಕ ಖುಷಿ ಪಟ್ಟರು.
ಗೊರವಯ್ಯನ ಭವಿಷ್ಯವಾಣಿ ಪ್ರಕಾರ ಮಳೆ, ಬೆಳೆ ಸೇರಿದಂತೆ ಎಲ್ಲವೂ ಸಂಪಾಗುತ್ತದೆ. ರೈತ ಸಮುದಾಯಕ್ಕೆ ಒಳ್ಳೆಯದಾಗುತ್ತದೆ. ನೀರಿಲ್ಲದೇ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗೊರವಯ್ಯನ ನುಡಿಯಿಂದ ಮುಂದಿನ ವರ್ಷವಾದರೂ ಲಾಭ ಕಾಣಬಹುದು ಎಂಬ ಲೆಕ್ಕಾಚಾರ ಹಾಕಿದ್ದಾರೆ. ಆದ್ರೆ, ಮಳೆ ಅಬ್ಬರಿಸಿ ಬೊಬ್ಬಿರಿದರೆ ಏನು ಎಂಬ ಮಾತೂ ಸಹ ಕೇಳಿ ಬರುತ್ತಿದೆ.
ಕಳೆದ ಬಾರಿಯ ಕಾರ್ಣಿಕವೂ ಅಚ್ಚರಿ ಮೂಡಿಸಿತ್ತು. ಅಂಬಲಿ ಹಳಿಸಿತು, ಕಂಬಳಿ ಬೀಸಿತಲೇ ಪರಾಕ್ ಎಂಬ ಕಾರ್ಣಿಕ ಆಗಿತ್ತು. ಅಂಬಲಿ ಹಳಸಿತು ಎಂದರೆ ಬರ ಎಂದರ್ಥ. ಕಂಬಳಿ ಬೀಸಿತಲೇ ಪರಾಕ್ ಎಂದರೆ ಕಂಬಳಿ ಹೊದ್ದವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂಬ ನುಡಿ ಎಂದೇ ವಿಶ್ಲೇಷಿಸಲಾಗಿತ್ತು. ಸಿಎಂ ಆಗಿ ಸಿದ್ದರಾಮಯ್ಯ ಅವರು ಅಧಿಕಾರ ಸ್ವೀಕರಿಸಿ ಹಳೆಯದಾಗಿತ್ತು. ಹೋದ ವರ್ಷ ನುಡಿದ ಭವಿಷ್ಯವಾಣಿ ಮಾತ್ರವಲ್ಲ, ಇಲ್ಲಿನ ಭವಿಷ್ಯವಾಣಿ ಮೊದಲಿನಿಂದಲೂ ಸತ್ಯವಾಗುತ್ತಲೇ ಬಂದಿದೆ. ಹಾಗಾಗಿ, ಮಳೆ, ಬೆಳೆ ಚೆನ್ನಾಗಿ ಆಗಲಿದೆ. ನಾವು ಕಷ್ಟ ಎದುರಿಸುವುದಿಲ್ಲ ಈ ವರ್ಷ ಎಂಬ ನಂಬಿಕೆ ರೈತ ಸಮುದಾಯದಲ್ಲಿ ಮೂಡಿದೆ.
ಕಾರ್ಣಿಕದ ಗೊರವಪ್ಪ ರಾಮಪ್ಪ ಅವರು 11 ದಿನಗಳ ಕಾಲ ಉಪವಾಸ ಇರುತ್ತಾರೆ. ನಂತರ ಕಾರ್ಣಿಕ ನುಡಿಯುವ ದಿನ ವಿಶೇಷ ಪೂಜೆ ನೆರವೇರಿಸಿ ಕಾರ್ಣಿಕ ಹೇಳುವ ಜಾಗಕ್ಕೆ ಬರುತ್ತಾರೆ. 15 ಅಡಿಯ ಬಿಲ್ಲನ್ನು ಏರಿ ಸದ್ದಲೇ ಎಂದು ಕೂಗಿದಾಗ ಎಷ್ಟೇ ಭಕ್ತರು ಸೇರಿದ್ದರೂ ಕೂಡ ಭಕ್ತರು ಕೇಕೆ, ಶಿಳ್ಳೆ, ಚಪ್ಪಾಳೆ ಸೇರಿದಂತೆ ಯಾವುದೇ ರೀತಿಯ ಸಪ್ಪಳವೂ ಇರುವುದಿಲ್ಲ. ಅಷ್ಟು ನಿಶ್ಯಬ್ಧ ವಾತಾವರಣ ಇರುತ್ತದೆ. 15 ಅಡಿಯ ಬಿಲ್ಲನ್ನು ಏರಿ ಸದ್ದಲೇ ಎಂದು ಕೂಗಿದಾಗ ಎಷ್ಟೇ ಭಕ್ತರು
ಸೇರಿದ್ದರೂ ಕೂಡ ಆ ಸ್ಥಳ ಸೂಜಿ ಬಿದ್ದರೂ ಸಪ್ಪಳ ಕೇಳುವಷ್ಟು ನಿಶ್ಶಬ್ಧವಾಗುತ್ತದೆ. ಸಂಪಾಯಿತಲೇ ಪರಾಕ್ ಎನ್ನುತ್ತಿದ್ದಂತೆ ಈ ವರ್ಷ ಎಲ್ಲರಲ್ಲೂ ಸಂಚಲನ ಮೂಡುವಂತೆ ಮಾಡಿದೆ.