SUDDIKSHANA KANNADA NEWS/ DAVANAGERE/ DATE:11-02-2024
ದಾವಣಗೆರೆ: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗೆ ಟಿಕೆಟ್ ನೀಡಲು ಪಾರದರ್ಶಕ ಸರ್ವೆ ನಡೆಸಬೇಕು. ಹೊರಗಿನ ಜಿಲ್ಲೆಯವರಿಗೆ ನೀಡದೇ ಸ್ಥಳೀಯರಿಗೆ ನೀಡಬೇಕು. ಏಕಮುಖ ನಿರ್ಧಾರ ಒಪ್ಪಲ್ಲ. ನಾನು ಪ್ರಬಲ ಟಿಕೆಟ್ ಆಕಾಂಕ್ಷಿ. ಜಿಲ್ಲೆಯಲ್ಲಿ ಪಕ್ಷ ಕಟ್ಟಿದ್ದು ಎಸ್. ಎ. ರವಿಂದ್ರನಾಥ್. ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡಬೇಕು ಎಂದು ಬಹಿರಂಗವಾಗಿಯೇ ಬುಸುಗುಟ್ಟಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರರ ಭೇಟಿ ಮಾಡಿದ್ದ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ವೈಲೆಂಟ್ ಆಗಿದ್ದರು. ಆದ್ರೆ, ಈಗ ದಿಢೀರನೇ ಸೈಲೆಂಟ್ ಆಗುವ ಮಾತನಾಡಿರುವುದು ಕುತೂಹಲ ಕೆರಳಿಸಿದೆ.
ದಾವಣಗೆರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ಮಾತನಾಡಲ್ಲ, ನಾಲ್ಕು ಗೋಡೆಗಳ ಮಧ್ಯೆ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ. ನಾನೇ ಪ್ರಬಲ ಟಿಕೆಟ್ ಆಕಾಂಕ್ಷಿ ಎಂದು ಯಾರೂ ಹೇಳಬಾರದು. ಹೈಕಮಾಂಡ್ ತೆಗೆದುಕೊಳ್ಳುವ
ನಿರ್ಧಾರಕ್ಕೆ ಎಲ್ಲರೂ ಬದ್ಧರಿರಬೇಕು ಎಂದಿದ್ದಾರೆ. ಸಂಸದ ಸಿದ್ದೇಶ್ವರರ ಹೆಸರು ಪ್ರಸ್ತಾಪಿಸದೇ ಕೆಂಡಕಾರಿದ್ದರು. ಆದ್ರೆ, ಈಗ ಸ್ವಲ್ಪ ತಣ್ಣಗಾದಂತೆ ಗೋಚರಿಸುತ್ತಿದೆ.
ಬಹಿರಂಗವಾಗಿ ಯಾರೂ ಮಾತನಾಡಬಾರದು. ಸಂಘಟನೆಗೆ ಒತ್ತು ಕೊಡಬೇಕು. ದಾವಣಗೆರೆ ಲೋಕಸಭಾ ಕ್ಷೇತ್ರ ಗೆಲ್ಲಬೇಕು. ಇದು ನಮ್ಮ ಗುರಿ. ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ, ಸಂಘಟನೆಗೆ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ನಮ್ಮಲ್ಲಿ ಯಾವುದೇ ಬಣಗಳು ಇಲ್ಲ. ನಾವೆಲ್ಲರೂ ಬಿಜೆಪಿ ಅಷ್ಟೇ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಕೊಡಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ಹಳೆಯ ವಿಷಯ. ಈಗ ಇದು ಯಾಕೆ
ಎಂದು ಪ್ರಶ್ನಿಸಿದ ಅವರು, ಪದಗ್ರಹಣ ಸಮಾರಂಭಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಬರಬೇಕಿತ್ತು. ತುರ್ತು ಕಾರ್ಯ ಇದ್ದ ಕಾರಣ ದೆಹಲಿಗೆ ಹೋಗಿದ್ದಾರೆ. ಬಿ. ಎಸ್. ಯಡಿಯೂರಪ್ಪ, ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ
ಬಂದು ಹೋಗಿದ್ದಾರೆ. ಹಾಗಾಗಿ, ಯಾವುದೇ ಬಣ ಇಲ್ಲ, ಇರೋದು ಬಿಜೆಪಿ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ನಾನೇನೂ ಮೌನ ತಾಳಿಲ್ಲ. ಪಕ್ಷದ ಚೌಕಟ್ಟಿನೊಳಗೆ ನಾಲ್ಕು ಗೋಡೆ ಮಧ್ಯೆ ಅಭಿಪ್ರಾಯ ಮಂಡಿಸುವ ಹಕ್ಕು ಇದೆ. ವಾಕ್ ಸ್ವಾತಂತ್ರ್ಯ ಇದೆ. ಭಾವನೆಗಳನ್ನು ಹೇಳಿಕೊಂಡಿದ್ದೇವೆ. ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡುತ್ತೇವೆ. ಬಹಿರಂಗವಾಗಿ ಮಾಧ್ಯಮದ ಮುಂದೆ ಹೇಳಲ್ಲ. ಇಲ್ಲಿ ಯಾರೂ ದೊಡ್ಡವರಲ್ಲ. ಪಕ್ಷ ದೊಡ್ಡದು, ಸಂಘಟನೆ ದೊಡ್ಡದು. ಏನು ಹೇಳುತ್ತಾರೋ ಆ ಕೆಲಸ ಮಾಡುತ್ತೇವೆ. ಪಕ್ಷದಡಿ ದುಡಿಯುತ್ತೇವೆ. ಬಹಿರಂಗವಾಗಿ ಯಾರೂ ಮಾಧ್ಯಮದವರ ಮುಂದೆ ಮಾತನಾಡಬಾರದು. ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದ ಅವರು, ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ ತುಂಬಾ ಚೆನ್ನಾಗಿ ಆಗಿದೆ. ನಿಷ್ಠಾವಂತ ಕಾರ್ಯಕರ್ತನ ಗುರುತಿಸಿ ಹುದ್ದೆ ನೀಡಲಾಗಿದೆ. ಅವರ ಜೊತೆಯಲ್ಲಿ ನಾವು ಪಕ್ಷ ಬಲಿಷ್ಠಗೊಳಿಸಲು ಶ್ರಮಿಸುತ್ತೇವೆ ಎಂದರು.
ಹರಿಹರ ಶಾಸಕ ಬಿ. ಪಿ. ಹರೀಶ್ ಅವರ ನೇತೃತ್ವದಲ್ಲಿ ಹೊನ್ನಾಳಿ, ಹರಿಹರದಲ್ಲಿ ಸಭೆ ನಡೆಸಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಸಭೆ ಯಾರು ನಡೆಸುತ್ತಾರೋ ಅವರನ್ನೇ ಕೇಳಿ. ನಾನೂ ಸಭೆ ನಡೆಸುತ್ತೇನೆ. ಅದರಲ್ಲಿ ವಿಶೇಷತೆ ಇಲ್ಲ. ಸಂಘಟನೆ ದೃಷ್ಟಿಯಿಂದ ಚರ್ಚೆ ನಡೆಸುತ್ತೇವೆ. ಜಿಲ್ಲಾಧ್ಯಕ್ಷರ ಬಿಟ್ಟು ಸಭೆ ನಡೆಸಿದ್ದೇವೆ ಎಂದು ಹೇಳುತ್ತೀರಿ. ಪದಗ್ರಹಣ ಆಗಿದ್ದು ಕೆಲ ದಿನಗಳ ಹಿಂದೆಯಷ್ಟೇ. ಇಲ್ಲಿ ಎ, ಬಿ, ಸಿ ಅಂತಾ ಟೀಂಗಳಿಲ್ಲ ಎಂದರು.
ದಾವಣಗೆರೆ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತಂದಿದ್ದೇವೆ. ಎಲ್ಲವೂ ಹೇಳಿದ್ದೇವೆ. ಅವರ ನಿರ್ಧಾರಕ್ಕೆ ಬದ್ಧರಿದ್ದೇವೆ. ಯಡಿಯೂರಪ್ಪ ಅವರು ಹೆಸರು ಎಲ್ಲಿ ಹೇಳಿದ್ದಾರೆ? 28 ಕ್ಷೇತ್ರಗಳಲ್ಲಿಯೂ ಗೆಲ್ಲಿಸಬೇಕು ಎಂದು ಹೇಳಿದ್ದಾರೆ. ಎಲ್ಲರಿಗೂ ಹೇಳಿದ್ದಾರೆ. ನಾನು ಆಕಾಂಕ್ಷಿ ಎಂದು ಯಾರೂ ಮಾತನಾಡಬಾರದು ಎಂಬ ಸೂಚನೆ ನೀಡಿದ್ದಾರೆ. ಯಾರ ಬಗ್ಗೆನೂ ಚರ್ಚೆ ಮಾಡಲು ಇಷ್ಟ ಪಡಲ್ಲ. ನಾನು ಪಕ್ಷದ ಕಾರ್ಯಕರ್ತ. ಹಾಗಾಗಿ, ಅವರು ಗೆಲ್ಲುತ್ತಾರೆ ಇವರು ಸೋಲುತ್ತಾರೆ ಎಂದು ಹೇಳಲ್ಲ. ಪಕ್ಷ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧ. ವರಿಷ್ಠರ ನಿರ್ಧಾರಕ್ಕೆ ತಲೆಬಾಗುತ್ತೇವೆ ಎಂದು ಹೇಳಿದರು.
ಈಶ್ವರಪ್ಪ ಪರ ಬ್ಯಾಟಿಂಗ್:
ದೇಶ ವಿಭಜನೆ ಮಾಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೊಳಿಸಬೇಕು ಎಂದು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಹೇಳಿದ್ದರಲ್ಲಿ ತಪ್ಪೇನಿದೆ? ಕಾಂಗ್ರೆಸ್ ನವರು ಮಾಡುವ ಕುತಂತ್ರದ ವಿರುದ್ಧ ಮಾತನಾಡಿದ್ದಾರೆ. ದೇಶ ವಿಭಜನೆ ಬಗ್ಗೆ ಮಾತನಾಡಿದರೆ ಸುಮ್ಮನೆ ಕೂರಬೇಕಾ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ರಾಜ್ಯ ಸರ್ಕಾರದ ಶೇಕಡಾ 40 ರಷ್ಟು ಕಮೀಷನ್ ಆರೋಪ ಮಾಡಿದ್ದಾರೆ. ಕೂಡಲೇ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.