SUDDIKSHANA KANNADA NEWS/ DAVANAGERE/ DATE:29-01-2025
ದಾವಣಗೆರೆ: ಜನರ ಸಂಕಷ್ಟಗಳಿಗೆ ಸ್ಪಂದಿಸುವ ಹಾಗೂ ಸಂಬಂಧಪಟ್ಟ ಇಲಾಖೆಯವರಿಗೆ ಮಾಹಿತಿ ನೀಡಿ ಸಮಾಜಸೇವೆ ಮಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತ ಎಂ. ಜಿ. ಶ್ರೀಕಾಂತ್ ಅವರನ್ನು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.
ದಾವಣಗೆರೆ ನಗರದಲ್ಲಿ ರಸ್ತೆಯಲ್ಲಿ ಗುಂಡಿಗಳು, ವಿವಿಧ ಕಡೆ ವಿದ್ಯುತ್ ಸಮಸ್ಯೆ, ಆಸ್ಪತ್ರೆ ಯಲ್ಲಿ ದಾಖಲಾದವರಿಗೆ ತುರ್ತು ಸಮಯದಲ್ಲಿ ರಕ್ತವನ್ನು ದೊರಕಿಸುವುದು, ಸಂಚಾರ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದರು. ಕಷ್ಟದಲ್ಲಿರುವ ಹಾಗೂ ಮಾಹಿತಿ ಇಲ್ಲದವರಿಗೆ ಮಾಹಿತಿ ನೀಡಿ ಸಹಕರಿಸುತ್ತಿದ್ದರು. ಎಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡಿದ್ದರು.
ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸರಿಪಡಿಸಲು ಜಿಲ್ಲಾಡಳಿತ, ಲೋಕಾಯುಕ್ತಕ್ಕೂ ದೂರು ನೀಡಿ ನಿರಂತರವಾಗಿ ಹೋರಾಟ ಮಾಡಿದ್ದರು. ಮಾಡುತ್ತಲೇ ಇದ್ದಾರೆ. ಇನ್ನೂ ಸಂಚಾರ ನಿಯಮಗಳ ವಿಚಾರಕ್ಕೆ ಬಂದರೆ ಪೊಲೀಸ್ ಇಲಾಖೆ ಜೊತೆ ಸಂಹವನ ನಡೆಸಿ ಎಷ್ಟೋ ಬಾರಿ ವಾಹನಗಳ ದಟ್ಟಣೆ ತಪ್ಪಿಸಲು ಸಹಕಾರವನ್ನೂ ನೀಡಿದವರು.
ಎಂ. ಜಿ. ಶ್ರೀಕಾಂತ್ ಅವರು ಮೊದಲಿನಿಂದಲೂ ಜನಪರವಾಗಿ ಕೆಲಸ ನಿರ್ವಹಿಸಿ ಸೈ ಎನಿಸಿಕೊಂಡವರು. ಯಾವುದೇ ಸಮಸ್ಯೆಗಳಿದ್ದರೂ ಎಂ. ಜಿ. ಶ್ರೀಕಾಂತ್ ಅವರಿಗೆ ಕರೆ ಬಂದಿರುತ್ತದೆ. ಕೆಲವೊಮ್ಮೆ ಶ್ರೀಕಾಂತ್ ಅವರೇ ಪೊಲೀಸರು ಬರುವ
ಮುನ್ನ ಸಂಚಾರ ದಟ್ಟಣೆ ಕ್ಲಿಯರ್ ಮಾಡಿದ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಅಪಘಾತ, ರೋಗಿಗಳಿಗೆ ರಕ್ತ ತುರ್ತು ಬೇಕಿದ್ದವರಿಗೆ ನೆರವು ನೀಡಿದ್ದಾರೆ. ಹಾಗಾಗಿ ಇಷ್ಟೆಲ್ಲಾ ಸಮಾಜ ಸೇವಾ ಕಾರ್ಯಗಳನ್ನು ಗುರುತಿಸಿ ಪೊಲೀಸ್ ಇಲಾಖೆಯು
ಸನ್ಮಾನಿಸಿ ಅಭಿನಂದಿಸಿದೆ.
ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯ ದಕ್ಷಿಣ ಸಂಚಾರಿ ಪೊಲೀಸ್ ಇಲಾಖೆಯವರು ಗುರುತಿಸಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ದ ಸಮಾರೋಪ ಸಮಾರಂಭದಲ್ಲಿ ಎಂಜಿ ಶ್ರೀಕಾಂತ್ ಅವರನ್ನು ಸನ್ಮಾನಿಸಲಾಯಿತು. .ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ದಾವಣಗೆರೆ ನಗರದ ಅನೇಕ ಸಮಸ್ಯೆಗಳನ್ನು ತ್ವರಿತವಾಗಿ ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ನಿರಂತರವಾಗಿ ಅವರ ಸಂಪರ್ಕದಲ್ಲಿ ಇದ್ದು ಸಮಸ್ಯೆಗಳನ್ನು ಸರಿಪಡಿಸುವ ತನಕ ಶ್ರಮವಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆಗಳನ್ನು ಬಿತ್ತರಿಸಿ ಜನಜಾಗೃತಿ ಮೂಡಿಸುವ ಜೊತೆಗೆ ಕಸ ಎಲ್ಲೆಂದರಲ್ಲಿ ಬಿಸಾಡುವವರಿಗೆ ಬಿಸಿ ಮುಟ್ಟಿಸುವ ಹಾಗೂ ಪರಿಸರ ಹೋರಾಟದಲ್ಲಿಯೂ ಪಾಲ್ಗೊಂಡಿದ್ದಾರೆ.
ಈ ವೇಳೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಎಸ್ಪಿ ಉಮಾ ಪ್ರಶಾಂತ್, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.