SUDDIKSHANA KANNADA NEWS/ DAVANAGERE/ DATE:14-02-2024
ದಾವಣಗೆರೆ: ಸಂತ ಸೇವಾಲಾಲ್ ಅವರ 285ನೇ ಜಯಂತ್ಯುತ್ಸವದ ಅಂಗವಾಗಿ ನ್ಯಾಮತಿ ತಾಲೂಕಿನ ಸೂರಗೊಂಡನಹಳ್ಳಿ ಪ್ರೀತಿ ಆರೈಕೆ ಟ್ರಸ್ಟ್ ಆಯೋಜಿಸದ್ದ ಪಾದಯಾತ್ರಿಗಳಿಗೆ ಪ್ರಥಮ ಚಿಕಿತ್ಸೆ ಮತ್ತು ಆರೋಗ್ಯ ಉಚಿತ ಶಿಬಿರವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಮೂರು ದಿನಗಳಿಂದ ಚಿನ್ನಿಕಟ್ಟೆಯ ಮಹಾದ್ವಾರದ ಬಳಿ ಆರೈಕೆ ಆಸ್ಪತ್ರೆಯಿಂದ ಆಯೋಜಿಸಿದ್ದ ಆರೋಗ್ಯ ತಪಾಸಣೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ಪಾದಯಾತ್ರಿಗಳಿಗೆ ಪ್ರಥಮ ಚಿಕಿತ್ಸೆ, ಆರೋಗ್ಯ ತಪಾಸಣೆ ನೆರವೇರಿಸಲಾಯಿತು.
ತಪಾಸಣೆ ಶಿಬಿರದಲ್ಲಿ ಚಿಕಿತ್ಸೆ ನೀಡಿ ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರವಿಕುಮಾರ್ ಟಿ.ಜಿ. ಅವರು ಮಾತನಾಡಿ. ಸೇವಾಲಾಲರು 18ನೇ ಶತಮಾನದಲ್ಲಿ ಬಂಜಾರ ಸಮಾಜವನ್ನು ಸಂಘಟಿಸಿ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವರೂಪವನ್ನು ಗಟ್ಟಿಗೊಳಿಸಿದ ಮಹಾನ್ ಸಂತರಾಗಿದ್ದಾರೆ. ಪ್ರತಿವರ್ಷವೂ ಲಕ್ಷಾಂತರ ಬಂಜಾರರು ನೂರಾರು ಕಿಲೋ ಮೀಟರ್ ಪಾದಯಾತ್ರೆಯ ಮೂಲಕ ಬಂದು ಸೇವಾಲಾಲ್ ರ ದರ್ಶನ ಪಡೆಯುತ್ತಾರೆ. ಸೇವಾಲಾಲರು ಬಂಜಾರ ಸಮುದಾಯಕ್ಕೆ ನೀಡಿದ ಕೊಡುಗೆ ಎಂಥಹದ್ದು ಎಂಬುದಕ್ಕೆ ನಿದರ್ಶನ ಎಂದು ಹೇಳಿದರು.
ಸಂತ ಸೇವಾಲಾಲರಂತಹ ಮಹನೀಯರ ಜನ್ಮಸ್ಥಾನವಾದ ಸೂರಗೊಂಡನಹಳ್ಳಿಯ ದಾವಣಗೆರೆ ಜಿಲ್ಲೆಯಲ್ಲಿದೆ ಎಂಬುದೇ ನಮ್ಮೆಲ್ಲರಿಗೂ ಹೆಮ್ಮೆ, ಸಂತೋಷದ ವಿಷಯ. ಆರೋಗ್ಯ ದಾಸೋಹದ ಮೂಲಕ ಆರೋಗ್ಯ ಸೇವೆ ಮತ್ತು ಜಾಗೃತಿ ಮಾಡುತ್ತಿರುವ ಪ್ರೀತಿ ಆರೈಕೆ ಟ್ರಸ್ಟ್ ಮೂಲಕ ಅಸಂಖ್ಯ ಪಾದಯಾತ್ರಿಗಳಿಗೆ ಸೇವೆ ಮಾಡುವ ಮೂಲಕ ಸಂತ ಸೇವಾಲಲರ ಕೃಪಾಶಿರ್ವಾದವನ್ನು ಪಡೆದ ಧನ್ಯತೆಯನ್ನು ನಾವು ಪಡೆದುಕೊಂಡಿದ್ದೇವೆ ಎಂದು ಹೇಳಿದರು.
ಜಗಳೂರಿನ ಮಾಜಿ ಶಾಸಕರಾದ ಟಿ.ಗುರುಸಿದ್ಧನಗೌಡ ಮಾತನಾಡಿ, ಮಾಡಿ ಉಣ್ಣ ಬೇಕಾದಷ್ಟು, ಬೇಡಿ ಉಣ್ಣು ಹಾಕಿದಷ್ಟು ಎಂಬ ಕಾಯಕ ತತ್ವವನ್ನು ಜಗತ್ತಿಗೇ ಸಾರಿದ ಸಂತ ಸೇವಾಲಾಲರ ಜನ್ಮಭೂಮಿಯ ದರ್ಶನ ಪಡೆದು, ಆರೋಗ್ಯ ಸೇವೆ ಮಾಡುವ ಪುಣ್ಯ ಸಿಕ್ಕಿದ್ದು ಸಂತಸ ನೀಡಿದೆ ಎಂದು ಹೇಳಿದರು.
ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ಉಪಾಧ್ಯಕ್ಷ ವಿನೋದ್ ಕುಮಾರ್ ಮಾತನಾಡಿ, ಸೇವಾಲಾಲರ ಪುಣ್ಯಕ್ಷೇತ್ರದಲ್ಲಿ ಆರೈಕೆ ಆಸ್ಪತ್ರೆ, ಪ್ರೀತಿ ಆರೈಕೆ ಟ್ರಸ್ಟ್ ಮೂಲಕ ಡಾ. ಟಿ.ಜಿ. ರವಿಕುಮಾರ್ ಅವರು ಮೂರು ದಿನಗಳ ಕಾಲ ನಿರಂತರವಾಗಿ ಉಷಿತ ತಪಾಸಣೆ ಮತ್ತು ಔಷಧ ನೀಡಿದ್ದಾರೆ. ಇದಕ್ಕಾಗಿ ಸಮಸ್ತ ಬಂಜಾರ ಸಮುದಾಯದವರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಶಿಬಿರದಲ್ಲಿ ಉದ್ಯಮಿಗಳಾದ ಅರವಿಂದ್, ಪ್ರವೀಣ್ ಪಾಟೀಲ್, ನಾಗರಾಜ ಸ್ವಾಮಿ, ನುಂಕೇಶ್, ಯುವಮುಖಂಡರಾದ ಡಿ.ಎಸ್. ಹರೀಶ್, ನಿಖಿಲ್ ಸೇರಿದಂತೆ ಹಲವು ಹಾಜರಿದ್ದರು.