SUDDIKSHANA KANNADA NEWS/ DAVANAGERE/ DATE:25-10-2024
ದಾವಣಗೆರೆ: 20 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಹರಿಹರ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಬಲೆಗೆ ಬಿದ್ದಿದ್ದು, ಕಂದಾಯ ಅಧಿಕಾರಿಯನ್ನೂ ವಶಕ್ಕೆ ಪಡೆದ ಘಟನೆ ಹರಿಹರ ಪಟ್ಟಣದಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ರಾಜು ಲಕ್ಷ್ಮಣ್ ಕಾಂಬ್ಳೆ ಅವರು ಕಳೆದ 23ರಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ತನ್ನ ಸಹೋದರ ಬಾಬು ಹರಿಹರ ನಗರದ ಹೊರ ವಲಯದ ಎನ್.ಹೆಚ್ ರಸ್ತೆಯಲ್ಲಿರುವ ಶ್ರೀದೇವಿ ಪೆಟ್ರೋಲ್ ಬಂಕ್ನ ನಿವೇಶನದ ಸುಮಾರು 3 ರಿಂದ 4 ವರ್ಷಗಳ ಕಂದಾಯವನ್ನು ಪಾವತಿಸಬೇಕಿತ್ತು. ಹರಿಹರ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ್ ಹಾಗೂ ಕಂದಾಯ ಅಧಿಕಾರಿ ಯು. ರಮೇಶ್ ಅವರು ನಿವೇಶನಕ್ಕೆ ಪ್ರಸಕ್ತ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ ಕಂದಾಯದ ಮೊತ್ತ 1,39,400 ರೂಗಳನ್ನು ಪಾವತಿಸಬೇಕಾಗುತ್ತೆ ಎಂದು ತಿಳಿಸಿದ್ದರು.
ಸದ್ಯ 2020-21ರಿಂದ ಪ್ರಸಕ್ತ ಸಾಲಿನವರೆಗೆ ಲೆಕ್ಕ ಹಾಕಿ ಬರುವ ಕಂದಾಯ ಮೊತ್ತ 1,39,400 ರೂಪಾಯಿಯಲ್ಲಿ ಕಡಿಮೆ ಮಾಡಿ, ಉಳಿದ ಹಣದಲ್ಲಿ ಶೇಕಡ 50 ರಷ್ಟು ಅಂದರೆ ಸುಮಾರು 50-60 ಸಾವಿರ ರೂಗಳ ಮೊತ್ತವನ್ನು ನೀಡುವಂತೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳಲು ಇಷ್ಟವಿಲ್ಲದೇ ಇದ್ದ ಕಾರಣ ನಗರಸಭೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು
ನೀಡಿದ್ದರು.
ಇಂದು ಪ್ರಕರಣದ ಮೊದಲ ಆರೋಪಿ ಅಧಿಕಾರಿ ನಾಗೇಶ ಅವರು ಪಿರ್ಯಾದಿಯಿಂದ 20,000 ರೂಪಾಯಿ ಲಂಚದ ಹಣ ಸ್ವೀಕರಿಸುವ ವೇಳೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಇನ್ನೂ ಕಂದಾ.ಯ ಅಧಿಕಾರಿ ರಮೇಶ್ ರನ್ನು ವಶಕ್ಕೆ
ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ. ಎಸ್.ಕೌಲಾಪೂರೆ, ಪೊಲೀಸ್ ಉಪಾಧೀಕ್ಷಕಿ ಕಲಾವತಿ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಮಧುಸೂದನ್ ಸಿ., ಪ್ರಭು ಬಸೂರಿನ, ಪಿ. ಸರಳ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.