SUDDIKSHANA KANNADA NEWS/ DAVANAGERE/ DATE:17-03-2024
ದಾವಣಗೆರೆ: ಶನಿವಾರ ದಾವಣಗೆರೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಆದಾಲತ್ ನಡೆಯಿತು.
ರಾಜಿ, ಸಂಧಾನದ ಮೂಲಕ ಜಿಲ್ಲೆಯಲ್ಲಿ 4568 ಜಾರಿಯಲ್ಲಿರುವ ಪ್ರಕರಣಗಳಲ್ಲಿ ರೂ. 12,56,89,479 ಹಣದ ಪರಿಹಾರ ಒದಗಿಸಲಾಗಿದೆ. ಮತ್ತು 1,44,773 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ 47,33,07,260 ಹಣದ
ಪರಿಹಾರವಾಗಿ ರಾಜೀ ಮೂಲಕ ಕೊಡಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ.
ವಿವಿಧ ಪ್ರಕರಣಗಳ ವಿವರ: 81 ಅಪರಾಧಿಕ ಪ್ರಕರಣಗಳು, 143 ಚೆಕ್ ಅಮಾನ್ಯ ಪ್ರಕರಣಗಳು, 19 ಬ್ಯಾಂಕ್ ವಸೂಲಾತಿ ಪ್ರಕರಣಗಳು, 14 ಇತರೆ ಹಣ ವಸೂಲಾತಿ ಪ್ರಕರಣಗಳು, 53 ಅಪಘಾತ ಪ್ರಕರಣಗಳು, 19 ಪಾಲು
ವಿಭಾಗ ಪ್ರಕರಣಗಳು, 200 ಜಾರಿ ಅರ್ಜಿಗಳು ಅಲ್ಲದ ಹಲವು ಕಾರಣಕ್ಕಾಗಿ ದಾಖಲಿಸಿದ 55 ದಾವೆಗಳು ಮತ್ತು ಜೀವನಾಂಶ ಕೋರಿ ದಾಖಲಿಸಿದ್ದ ದಾವೆಗಳು ರಾಜೀ ಮೂಲಕ ಇತ್ಯರ್ಥಗೊಂಡಿರುತ್ತದೆ.
ಇದಲ್ಲದೇ ಇತರೆ ಪ್ರಕರಣಗಳು ಸೇರಿ ಒಟ್ಟು 1568 ಜಾರಿಯಲ್ಲಿದ್ದ ಪ್ರಕರಣಗಳು ಇತ್ಯರ್ಥಗೊಂಡಿದೆ. ಇತ್ಯರ್ಥವಾದ ಪ್ರಕರಣಗಳಲ್ಲಿ ಪ್ರಮುಖವಾಗಿ ಕೌಟುಂಬಿಕ ಕಲಹದಿಂದಾಗಿ ಬೇರೆಯಾಗಿದ್ದ 8 ಜೋಡಿ ದಂಪತಿಗಳು ಒಂದಾಗಿದ್ದು ವಿಶೇಷವಾಗಿತ್ತು. ಜಿಲ್ಲೆಯಾದ್ಯಂತ ಸುಮಾರು 513 ಕ್ಕಿಂತ ಹೆಚ್ಚು ಶಾಲಾ ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಗಳ ಕುರಿತು ಕಂದಾಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ರಾಜಿ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಮತ್ತು ಅವರುಗಳಿಗೆ ಸರ್ಕಾರದಿಂದ ಬರಬಹುದಾದ ವಿದ್ಯಾರ್ಥಿ ವೇತನ ಹಾಗೂ ಇತರ ಅನುಕೂಲತೆಗಳಿಗೆ ಅನುವು ಮಾಡಿಕೊಟ್ಟಂತಾಯಿತು.
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸಹಕರಿಸಿದ ನ್ಯಾಯಾವಾದಿಗಳು, ವಕೀಲರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ
ಅವರು ಅಭಿನಂದಿಸಿದ್ದಾರೆ.