SUDDIKSHANA KANNADA NEWS/ DAVANAGERE/ DATE:16-04-2025
ದಾವಣಗೆರೆ: ಜಾತಿ ಗಣತಿ ವಿಚಾರ ಸಂಬಂಧ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೂ ಲಿಂಗಾಯತ ಸಮುದಾಯದ ಏಳು ಸಚಿವರಿದ್ದರೂ ಏನೂ ಮಾತನಾಡುತ್ತಿಲ್ಲ. ಅವರಿಗೆ ಕೆಪಾಸಿಟಿ ಇಲ್ಲ. ಹಾಗಾಗಿ, ಕೂಡಲೇ ರಾಜೀನಾಮೆ ನೀಡುವುದು ಸೂಕ್ತ ಎಂದು ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಮಾತು ಕೇಳಿ ಬರುತ್ತಿದ್ದಂತೆ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಒಕ್ಕಲಿಗ ಶಾಸಕರ ಕರೆದರು. ಆದ್ರೆ, ಲಿಂಗಾಯತ ಸಮುದಾಯದ ಸಚಿವರಿಗೆ ಏನಾಗಿದೆ. ಯಾಕೆ ಡಿಕೆ ಶಿವಕುಮಾರ್ ಸಾಹೇಬ್ರನ್ನು ಇಷ್ಟಪಡುತ್ತೇವೆಂದರೆ ಇದಕ್ಕೆ ಎಂದು ಹೇಳಿದರು.
ಸಮುದಾಯದವರಿಗೆ ಅನ್ಯಾಯ ಆಗಿದೆ ಎಂದು ಬೇರೆ ಸಮುದಾಯದ ಶಾಸಕರು, ಸಚಿವರು ಸಭೆ ಕರೆಯುತ್ತಾರೆ. ಯಾವಲಿಂಗಾಯತ ಸಮಾಜದ ಸಚಿವರುಗಳು ಶಾಸಕರ ಸಭೆ ಕರೆದಿದ್ದಾರೆ. ಯಾವ ನೈತಿಕತೆ ಇವರಿಗಿದೆ, ರಾಜೀನಾಮೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಾಯತ ಸಮಾಜದ ಶಾಸಕರನ್ನು ಕರೆದು ಚರ್ಚೆ ಮಾಡಿದ್ದಾರಾ? ಈಶ್ವರ್ ಖಂಡ್ರೆ ಅವರಿಗೆ ಫೋನ್ ಮಾಡಿದೆ. ಕರೆ ಸ್ವೀಕರಿಸಲಿಲ್ಲ. ಇಂಥವರನ್ನು ನಂಬಿಕೊಂಡು ಇರಲು ಆಗುತ್ತಾ? ನಾವು ಯಾವ ರೀತಿ ರಾಜಕೀಯ ಮಾಡಬೇಕು? ಈಶ್ವರ್ ಖಂಡ್ರೆ ಅವರ ಜೊತೆ ಜಾತಿಗಣತಿ ವಿಚಾರ ಸಂಬಂಧ ಚರ್ಚೆ ಮಾಡಲು ಕೇಳೋಣ ಎಂದು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಏಳು ಸಚಿವರು ರಾಜೀನಾಮೆ ಕೊಡಿಸಿ, ಅವರ ಕೈಯಲ್ಲಿ ಏನೂ ಕೆಪಾಸಿಟಿ ಇಲ್ಲ ಎಂದು ಕಿಡಿಕಾರಿದರು.
ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಆಗುತ್ತಿದ್ದರೂ ಯಾವ ಸಚಿವರು ಧ್ವನಿ ಎತ್ತಿಲ್ಲ. ಸಭೆ ಕರೆದು ಚರ್ಚೆ ಮಾಡಿ. ನಮ್ಮ ಹಿಂದೆ ಮಠಾಧೀಶರು ಇರುತ್ತಾರೆ. ಯಾವ ರೀತಿ ಉತ್ತರ ನೀಡುತ್ತೀರಾ? ನಮ್ಮ ಸಮಾಜದವರ ಬಳಿಗೆ ಹೋಗಿ ಕಾಂಗ್ರೆಸ್ ಗೆ ಮತ ಹಾಕಿ ಎಂದು ಕೇಳಿದರೆ ಯಾವ ರೀತಿ ಉತ್ತರ ಕೊಡುತ್ತಾರೆ? ನಾವು ಹೇಗೆ ಮತ ಕೇಳೋದು? ಎಂದು ಪ್ರಶ್ನಿಸಿದ ಅವರು, ಎಲ್ಲಾ ಸಮುದಾಯವೂ ಬೇಕು. ನಮ್ಮ ಸಮುದಾಯಕ್ಕೂ ಮುಖಂಡರು ಬೇಕು. ಇಲ್ಲಿಯವರೆಗೆ ಒಬ್ಬರಾದರೂ ಮಾತನಾಡಿದ್ದಾರಾ? ಸಭೆ ಕರೆದಿದ್ದರಾ? ಅವರಿಗೆ ಅವರ ವ್ಯವಹಾರ, ಅಧಿಕಾರ, ಅವರ ಕುಟುಂಬವಷ್ಟೇ ಮುಖ್ಯ ಹೊರತು ಸಮಾಜವಲ್ಲ. ಸ್ವಾರ್ಥ ಅವರದ್ದು. ದಯಮಾಡಿ ಕೂಡಲೇ ಸಭೆ ಕರೆಯಬೇಕು ಎಂದು ಶಿವಗಂಗಾ ಬಸವರಾಜ್ ಒತ್ತಾಯಿಸಿದರು.