SUDDIKSHANA KANNADA NEWS/ DAVANAGERE/ DATE:18-08-2024
ದಾವಣಗೆರೆ: ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯು ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾಗಿದ್ದು, ಅಪರಾಧಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ತಲಾ 10 ಸಾವಿರ ರೂಪಾಯಿ ದಂಡ ವಿಧಿಸಿ 1ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಕುಸುಮ ಅಲಿಯಾಸ್ ಪುಷ್ಪ ಹಾಗೂ ಕೆರಬಿಳಚಿಯ ಪ್ರಭು ಶಿಕ್ಷೆಗೆ ಒಳಪಟ್ಟ ಅಪರಾಧಿಗಳು. ಲೋಕೇಶಪ್ಪ ಕೊಲೆಗೀಡಾಗಿದ್ದ ವ್ಯಕ್ತಿ.
ಘಟನೆ ಹಿನ್ನೆಲೆ ಏನು…?
2018ರ ಜೂನ್ 28ರಂದು ಚನ್ನಗಿರಿ ತಾಲೂಕಿನ ಬನ್ನಿಹಟ್ಟಿ ಗ್ರಾಮದ ನಾಗರಾಜ ಎಂಬುವವರು ಚನ್ನಗಿರಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ತನ್ನ ಅಣ್ಣನ ಸಾವಿಗೆ ಅತ್ತಿಗೆ ಹಾಗೂ ಆಕೆ ಪ್ರಿಯಕರ ಎಂದು ದೂರಿದ್ದರು. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನನ್ನ ತಂದೆಗೆ ಒಟ್ಟು ಐವರು ಮಕ್ಕಳು. ಇದರಲ್ಲಿ ಮೊದಲನೆಯವನು ಲೋಕೇಶಪ್ಪ. ಸಹೋದರ ಮತ್ತು ಆತನ ಹೆಂಡತಿ ಕುಸುಮಾ ಇಬ್ಬರೂ ಸಹ ಬೇರೆಯಾಗಿ ವಾಸ ಮಾಡುತ್ತಿದ್ದು, ಸಂಸಾರದ ಸಣ್ಣ ಪುಟ್ಟ ವಿಚಾರದಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದರು, ಈ ಬಗ್ಗೆ ಗ್ರಾಮಸ್ಥರು ಹಾಗೂ ಸಂಬಂಧಿಕರು ಹಲವಾರು ಬಾರಿ ಬುದ್ದಿವಾದ ಸಹ ಹೇಳಿದ್ದರು.
ಆದ್ರೆ, 2021 ರ ಜುಲೈ 22 ರಂದು ರಾತ್ರಿಯ ಸಮಯದಲ್ಲಿ ಅಣ್ಣ ಮೃತ ಲೋಕೇಶನು ಮನೆಯಲ್ಲಿ ಊಟ ಮಾಡಿ ಸ್ವಲ್ಪ ಹೊತ್ತು ಟಿ,ವಿ. ನೋಡಿ ಮಲಗಿದ್ದು, ಮಾರನೆಯ ದಿನ ಅಂದರೆ 28ರಂದು 7.30 ಗಂಟೆಗೆ ಮೃತನ ಹೆಂಡತಿ ಕುಸುಮಾ ಅವರು ತಾಯಿಯನ್ನು ಕರೆದು ನಿಮ್ಮ ಮಗ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಮೃತನ ತಾಯಿ ಕಿರುಚಿದ್ದಾರೆ. ಆಗ ಅಕ್ಕ ಪಕ್ಕ ಹಾಗೂ ಗ್ರಾಮಸ್ಥರು ಎಲ್ಲರೂ ಹೋಗಿ ನೋಡಿದಾಗ ಮೃತನು ನಾಲಿಗೆ ಕಚ್ಚಿಕೊಂಡಂತೆ ಮತ್ತು ಮೃತನ ಕತ್ತಿನಲ್ಲಿ ಹಗ್ಗದಿಂದ ಬಿಗಿದಿರುವಂತೆ ಕಂಡು ಬಂದಿತ್ತು. ಮೃತ ಲೋಕೇಶನನ್ನು ಆತನ ಹೆಂಡತಿ ಕುಸುಮಾ ಮತ್ತು ಇತರೆಯವರು ಸೇರಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸ್ ಇನ್ ಸ್ಪೆಕ್ಟರ್ ಪಿ. ಬಿ. ಮಧು ಕೈಗೊಂಡು ತನಿಖೆಯಲ್ಲಿ ಕೊಲೆಯಾದ ಲೋಕೇಶಪ್ಪ (35) ಈತನ ಹೆಂಡತಿ ಕುಸುಮ ಅಲಿಯಾಸ್ ಪುಷ್ಪ ಮತ್ತು ಪ್ರಕರಣದ ಎರಡನೇ ಆರೋಪಿ ಪ್ರಭು
ನಡುವೆ ಅಕ್ರಮ ಸಂಬಂಧ ಇತ್ತು. ಇವರಿಬ್ಬರು ಅಕ್ರಮ ಸಂಬಂಧ ಹೊಂದಿರುವುದು ಕುಸುಮ ಗಂಡ ಲೋಕೇಶಪ್ಪನಿಗೆ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಕುಸುಮ ಮತ್ತು ಪ್ರಭು ಇವರು ಸೇರಿ ಲೋಕೇಶಪ್ಪನ ಕುತ್ತಿಗೆಗೆ ವೇಲಿನಿಂದ ಬಿಗಿಯಾಗಿ ಬಿಗಿದು ಕೊಲೆ ಮಾಡಿರುವುದು ತನಿಖೆಯಿಂದ ಸಾಬೀತಾಗಿತ್ತು.
ದಾವಣಗೆರೆಯ 1ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯ ನವರು ಆರೋಪಿತರಾದ ಕುಸುಮ ಅಲಿಯಾಸ್ ಪುಷ್ಪ, ಪ್ರಭು ಮೇಲಿನ ಆರೋಪ ಸಾಬೀತಾಗಿದ್ದರಿಂದ ಜೀವಾವಧಿ ಕಾರಗೃಹ ವಾಸ ಮತ್ತು ತಲಾ 10,000 ರೂ ದಂಡ ವಿಧಿಸಿ ತೀರ್ಪುನೀಡಿದ್ದಾರೆ. ಪಿರ್ಯಾದಿ ಪರ ಸರ್ಕಾರದ ವಕೀಲ ಕೆ. ಎಸ್. ಸತೀಶ್‌ಕುಮಾರ್ ವಾದ ಮಂಡಿಸಿದ್ದರು.
ಪ್ರಕರಣದಲ್ಲಿ ಪೂರ್ಣ ತನಿಖೆಮಾಡಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ ತನಿಖಾಧಿಕಾರಿಯಾದ ಪೊಲೀಸ್ ನಿರೀಕ್ಷಕ ಪಿ. ಬಿ. ಮಧು, ಸಿಬ್ಬಂದಿಯನ್ನು ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ವಿಜಯಕುಮಾರ ಎಂ. ಸಂತೋಷ ಮತ್ತು ಜಿ. ಮಂಜುನಾಥ, ಚನ್ನಗಿರಿ ಪೊಲೀಸ್ ಉಪಾಧೀಕ್ಷಕ ರುದ್ರಪ್ಪ ಎಸ್. ಉಜ್ಜಿನಕೊಪ್ಪ ಅವರು ಶ್ಲಾಘಿಸಿದ್ದಾರೆ.