SUDDIKSHANA KANNADA NEWS/ DAVANAGERE/ DATE:18-08-2024
ದಾವಣಗೆರೆ: ಚಿತ್ರದುರ್ಗದ ಸಿರಿಗೆರೆಯ ತರಳಬಾಳು ಬೃಹನ್ಮಠವು ರಾಜ್ಯದ ಪ್ರಖ್ಯಾತ ಮಠಗಳಲ್ಲಿ ಒಂದು. ಈ ಮಠವು ಹೊಂದಿರುವ ಇತಿಹಾಸ, ಪರಂಪರೆ ದೊಡ್ಡದು. ಡಾ. ಶಿವಮೂರ್ತಿ ಶಿವಾಚಾರ್ಯ ( Shivamurthy shivacharya)ಮಹಾಸ್ವಾಮೀಜಿ ಅವರು ಪೀಠಾಧಿಪತಿಯಾದ ಬಳಿಕ ಕೈಗೊಂಡಿರುವ ಕೈಂಕರ್ಯಗಳು, ಜಲಕ್ರಾಂತಿ, ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆ ನಿಜಕ್ಕೂ ಅನನ್ಯ. ಈ ಶ್ರೀಗಳೆಂದರೆ ಭಕ್ತರು ತೋರುವ ಪ್ರೀತಿ, ವಿಶ್ವಾಸ, ಗೌರವ ಬಣ್ಣಿಸಲು ಅಸಾಧ್ಯ. ಅಷ್ಟರ ಮಟ್ಟಿಗೆ ಗುರುಗಳೆಂದರೆ ಮಠದ ಭಕ್ತರಿಗೆ ನಂಬಿಕೆ.
ಹಾಗಾಗಿ, ಸಿರಿಗೆರೆ ಶ್ರೀಗಳೆಂದರೆ ಎಲ್ಲರಲ್ಲಿಯೂ ಪ್ರೀತಿಯ ಭಕ್ತಿ. ಅಷ್ಟೇ ಆರಾಧಿಸುತ್ತಾರೆ. ಗೌರವಿಸುತ್ತಾರೆ. ಶ್ರೀಗಳ ಮಾತು ವೇದವಾಕ್ಯದಂತೆ ಪರಿಪಾಲಿಸುತ್ತಾರೆ. ಆದ್ರೆ, ಇತ್ತೀಚಿನ ಬೆಳವಣಿಗೆಗಳು ಶ್ರೀಗಳಿಗೆ ನೋವು ತಂದಿದೆ. ಆದ್ರೆ, ಶಿವಮೂರ್ತಿ
ಶಿವಚಾರ್ಯ ಸ್ವಾಮೀಜಿ ಅವರು 1968ನೇ ಇಸವಿಯ ಮೇ 4 ರಂದು ಬರೆದ ಪತ್ರವು ಸುದ್ದಿಕ್ಷಣ ಮೀಡಿಯಾಕ್ಕೆ ಲಭಿಸಿದೆ. ಇದು ತುಂಬಾನೇ ಇಂಟ್ರೆಸ್ಟಿಂಗ್ ಇದೆ.
4-05-1968ರಲ್ಲಿ ಬರೆದ ಪತ್ರದಲ್ಲೇನಿದೆ…?
ತೀ!! ತಂದೆಯವರಿಗೆ ಶಿವಮೂರ್ತಿಯು ಮಾಡುವ ಶಿರಸಾಷ್ಟಾಂಗ ನಮಸ್ಕಾರಗಳು. ನೀವು ಬರೆದ ಪತ್ರ ಹಾಗೂ ಹಣ ಸಕಾಲಕ್ಕೆ ತಲುಪಿರುತ್ತದೆ. ಪರೀಕ್ಷೆಯ ಅವಸರದಲ್ಲಿ ಪತ್ರ ಬರೆಯಲಾಗಲಿಲ್ಲ. ಕಳೆದ ತಿಂಗಳು 23ರಿಂದ ನಮ್ಮ ಪರೀಕ್ಷೆ ಆರಂಭವಾಗಿ ನಿನ್ನೆಗೆ ಮೂರು ಪೇಪರ್ ಪರೀಕ್ಷೆ ಮುಗಿದವು. ಶ್ರೀಗಳವರ ಆಶೀರ್ವಾದದಿಂದ ಎಲ್ಲದರಲ್ಲಿಯೂ
ಚೆನ್ನಾಗಿ ಬರೆದಿರುತ್ತೇನೆ.
ನಿನ್ನೆ ಪರೀಕ್ಷೆಯಲ್ಲಂತೂ ತುಂಬಾ ಚೆನ್ನಾಗಿ ಬರೆದಿರುತ್ತೇನೆ. ಇನ್ನು ಒಂದೇ ಒಂದು ಪರೀಕ್ಷೆ ಬರುವ ಸೋಮವಾರ (6ನೇ ತಾರೀಖು) ಇದೆ. ಅದರಲ್ಲಿಯೂ ಚೆನ್ನಾಗಿ ಬರೆಯುವ ಧೈರ್ಯವಿದೆ. ಒಟ್ಟಿನಲ್ಲಿ ಫಸ್ಟ್ ಕ್ಲಾಸ್ ಬರುವುದರಲ್ಲಿ ಯಾವ ಸಂದೇಹವೂ ಇಲ್ಲ.
ಇವತ್ತು ಬೆಳಿಗ್ಗೆ ರೂಮಿನ ಬಾಗಿಲು ಹಾಕುವಾಗ ಬೆರಳು ಇರಿದು ಸ್ವಲ್ಪ ಗಾಯವಾಗಿರುತ್ತದೆ.
ಆದರೆ ಭಯಪಡುವ ಕಾರಣವೇನೂ ಇಲ್ಲ. ಪುಣ್ಯವಶಾತ್ ಎಡಗೈ ಬೆರಳುಗಳಾಗಿದ್ದರಿಂದ ಪರೀಕ್ಷೆಯಲ್ಲಿ ಬರೆಯಲು ಯಾವ ಆತಂಕವೂ ಇಲ್ಲ. ಬಲಗೈಗೇನಾದರೂ ಆಗಿದ್ದರೆ ತುಂಬಾ ತೊಂದರೆಯಾಗುತಿತ್ತು. ಸರಿಯಾಗಿ ಔಷಧೋಪಚಾರ ಮಾಡಿ ಒಂದು ಇಂಜೆಕ್ಷನ್ ಕೂಡ ತೆಗೆದುಕೊಂಡಿರುತ್ತೇನೆ. ಈಗ ಯಾವ ತರಹದ ನೋವು ಕಾಣಿಸುತ್ತಿಲ್ಲ. ಕಿಳಿಸದೇ ಇರಬಾರದೆಂದು ತಿಳಿಸಿರುತ್ತೇನೆ.
6ನೇ ತಾರೀಖು ಪರೀಕ್ಷೆ ಮುಗಿದ ನಂತರ ಇಲ್ಲಿ ನಮ್ಮ ಸ್ನೇಹಿತರ ಮನೆಯಲ್ಲಿ ಒಂದು ಮದುವೆ ಇದೆ. ಅವರ ಊರು ಕಾಶಿಯಿಂದ 40 ಮೈಲಿ ದೂರದಲ್ಲಿದೆ. ಅವರು ಮದುವೆಗೆ ಕರೆದಿರುವುದರಿಂದ ಹೋಗುವ ವಿಚಾರವಿದೆ. ಆನಂತರ ಅಲ್ಲಿಂದಲೇ ಪಾಟ್ಲಾಕ್ಕೆ ಹೋಗಿ ಅದರ ಸಮೀಪದಲ್ಲಿರುವ ಬಹು ಹಿಂದಿನ ಕಾಲದ ಐತಿಹಾಸಿಕ ಸ್ಥಳವಾದ ನಾಲಂದ (ಇಲ್ಲಿ ಹಿಂದೆ ಒಂದು ವಿಶ್ವವಿದ್ಯಾಲಯವಿತ್ತು)ವನ್ನು ನೋಡಬೇಕೆಂಬ ಮನಸ್ಸು ಮಾಡಿರುತ್ತೇನೆ.
ಇಲ್ಲಿ ಒಳ್ಳೆಯ ಸಂಗೀತದ ಉಪಾಧ್ಯಾಯರು ಸಿಕ್ಕಿದ್ದರಿಂದ ಈಗ ಮೊದಲಿಗಿಂತಲೂ ಚೆನ್ನಾಗಿ ಪಿಟೀಲನ್ನು ನುಡಿಸುವುದನ್ನು ಕಲಿತಿದ್ದೇನೆ. ಈ ತರಹ ತುಂಬಾ ಹೊತ್ತು ಚೆನ್ನಾಗಿ ಪಾಠ ಹೇಳುವವರು ಇದುವರೆಗೂ ದೊರೆತಿರಲಿಲ್ಲ. ಇವರು ಮೊದಲು ದಿಲ್ಲಿಯಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ಇದ್ದರು.
ಇಷ್ಟು ಇಲ್ಲಿಯ ವಿಷಯ, ಅಲ್ಲಿಯ ವಿಷಯಗಳಿಗೆ ಬರೆಯಿರಿ. ಅಮ್ಮ ಹಾಗೂ ತಾಯಿಯವರು ತುಂಬಾ ಕನವರಿಸುತ್ತಾರೆಂದು ಕಾಣಿಸುತ್ತದೆ. ಅವರಂತೆಯೇ ನಾನೂ ನಮ್ಮ ಗುರುಗಳನ್ನು ಕನವರಿಸುತ್ತಿದ್ದೇನೆ. ಎಷ್ಟೋ ವೇಳೆ ಅವರ ಫೋಟೋ ನೋಡುತ್ತಾ ಕೂತು ಬಿಡುತ್ತೇನೆ.
ಆಗಾಗ್ಗೆ ಕನಸಿನಲ್ಲಿಯೂ ನೋಡುತ್ತಲೇ ಇರುತ್ತೇನೆ. ಉದಾಹರಣೆಗೆ ಇವತ್ತು ಬೆಳಿಗ್ಗೆ ಅವರ ದರ್ಶನ ಕನಸಿನಲ್ಲಿ ಆಯಿತು. ಅಪರೂಪಕ್ಕೆ ದರ್ಶನವಾದ್ದರಿಂದ ಅವರ ಪಾದಗಳಿಗೆ ತಲೆಯೂರಿ ಬಹಳ ಹೊತ್ತು ಮೇಲೆ ಏಳಲೇ ಇಲ್ಲ. ಆನಂತರ ಎದ್ದೆ. ಎರಡು ರುದ್ರಾಕ್ಷಿ ಮಾಲೆಗಳನ್ನು ಗುರುಗಳು ನನ್ನ ಕೊರಳಿಗೆ ಹಾಕಿದರು. ಆನಂತರ ಎಚ್ಚರವಾಯಿತು.
– ಇತಿ ಶಿರಸಾಷ್ಟಾಂಗ ನಮಸ್ಕಾರಗಳು
ತ. ಶಿವಮೂರ್ತಿ
ಇದು ಸಿರಿಗೆರೆ ಶ್ರೀಗಳು ಸನ್ಯಾಸ ಬದುಕಿಗೆ ಮುನ್ನ ವಿದ್ಯಾಭ್ಯಾಸ ಮಾಡುತ್ತಿದ್ದಾಗ ತಂದೆಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿರುವ ಅಂಶಗಳು. ವಿದ್ಯಾರ್ಥಿ ದಿಸೆ ಜೀವನದಿಂದಲೇ ಸುಳ್ಳು ಹೇಳಬಾರದು. ಎಲ್ಲವನ್ನೂ ತಂದೆಗೆ ಒಪ್ಪಿಸಬೇಕು. ಓದುವ, ಬೇರೆ ಕಡೆ ಹೋಗುವ, ಅಭ್ಯಸಿಸುವ, ತನಗಾಗುತ್ತಿರುವ ತಳಮಳ ಕುರಿತಂತೆ ಸವಿಸ್ತಾರವಾಗಿ ಬರೆದಿದ್ದರು. ಈ ಪತ್ರ ಓದಿದವರಿಗೆ ಒಂದಂತೂ ಅನಿಸುತ್ತದೆ. ಅದೇನೆಂದರೆ ಗುರುಗಳು ಎಂದಿಗೂ ಸುಳ್ಳು ಹೇಳುವುದಿಲ್ಲ. ಸತ್ಯಪರಿಪಾಲಕರು. ನೇರವಾಗಿ ಇದ್ದ ವಿಷಯ ಹೇಳುವವರು.
ಈಗ ಈ ಪತ್ರ ಯಾಕೆ ಪ್ರಕಟಿಸಲಾಗುತ್ತಿದೆ ಎಂದರೆ ಎಷ್ಟೋ ಮಂದಿಗೆ ಈ ವಿಚಾರವೇ ಗೊತ್ತಿರಲಿಲ್ಲ. ಗುರುಗಳ ಬಗ್ಗೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಅಂದಿನ ಕಾಲದಲ್ಲಿಯೇ ದೇವರು ಎಂದು ಭಾವಿಸಿದ್ದರು. ಹಾಗಾಗಿ, ಅವರು ಇಂದು ಇಷ್ಚು ಎತ್ತರಕ್ಕೆ ಬೆಳೆದಿದ್ದಾರೆ. ಕೋಟ್ಯಂತರ ಭಕ್ತರ ಸಂಪಾದಿಸಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲ, ದೇಶ, ರಾಷ್ಟ್ರಮಟ್ಟದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ರೂಪಾ ಅವರು ನೀಡಿದ ಪತ್ರವಿದು..!
ರೆಸಾರ್ಟ್ ನಲ್ಲಿ ಸಭೆ ನಡೆಸುವವರಿಗೇನೂ ಗೊತ್ತು…? ಸತ್ಯಪೂರ್ಣ, ಅಮೂಲ್ಯ, ಅಚಿಂತ್ಯ, ಅಗಮ್ಯವೆಂಬುದು….!!!
ಅಪರೂಪದಲ್ಲಿ ಅಪರೂಪ ಎನ್ನುವ ಈ ಪತ್ರವನ್ನು ಮಠದ ಭಕ್ತರಾದ ರೂಪ ಅವರು ಕೊಟ್ಟಿದ್ದಾರೆ.
ಅಂದೇ ಇಂಗಿತ:
ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾಗುವ ಪೂರ್ವದಲ್ಲಿ ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ
ದಿನಮಾನದ ದಿನಾಂಕವಾದ 04-05-1968 ರಂದು ತಮ್ಮ ಪೂರ್ವಾಶ್ರಮದ ತಂದೆಯವರಿಗೆ ಬರೆದಿರುವ ಅಪರೂಪದ ಪತ್ರದಲ್ಲಿ ಶ್ರೀ ಜಗದ್ಗುರುಗಳವರು ನಳಂದ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡುವ ಮನೋ ಇಂಗಿತವನ್ನು ಪ್ರಸ್ತಾಪ ಮಾಡಿದ್ದಾರೆ.
ಎಷ್ಟೊಂದು ಜ್ಞಾನದಾಹ:
ಪೂಜ್ಯ ಶ್ರೀ ಜಗದ್ಗುರುಗಳವರಿಗೆ ಉನ್ನತ ಅಧ್ಯಯನ ಮತ್ತು ಸಂಶೋಧನೆಯ ಮೇಲೆ ಎಷ್ಟೊಂದು ಜ್ಞಾನದಾಹವಿತ್ತು ಎಂಬುದನ್ನು ಸಾಕ್ಷೀಕರಿಸುತ್ತದೆ.
ಸಿರಿಗೆರೆ ಶ್ರೀಗಳಿಗೆ ಸಮಾಜವೇ ಋಣಿಯಾಗಿರಬೇಕು:
ಸಮಾಜದ ಮತ್ತು ಮಠದ ಬಿಡಿಗಾಸನ್ನು ಪಡೆಯದೆ ವಿದ್ಯಾರ್ಥಿವೇತನದಿಂದಲೆ ದೇಶ ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಿ ವಿದ್ವತ್ಪೂರ್ಣ ಮಹಾಗುರುವಾದ ಶ್ರೀ ಜಗದ್ಗುರುಗಳವರು ಮಠಕ್ಕೆ ಪೀಠಾಧಿಪತಿ ಆಗದೇ ಮುಂದುವರಿದಿದ್ದರೆ ವಿಶ್ವದಲ್ಲಿಯೇ
ಮೇರು ಸಾಧನೆಗಳಿಗೆ ಕಾರಣೀಕೃತರಾಗುತ್ತಿದ್ದರು. ಸಿರಿಗೆರೆ ತರಳಬಾಳು ಮಠವು ವಿಶ್ವಮಾನ್ಯವಾಗಲು ಸಾಧ್ಯವಿರಲಿಲ್ಲ. ಪೂಜ್ಯ ಶ್ರೀ ಜಗದ್ಗುರುಗಳವರ ತ್ಯಾಗ ಜೀವನಕೆ ಇಡೀ ಸಮಾಜವೇ ಋಣಿಯಾಗಿರಬೇಕು.
ಪತ್ರದಲ್ಲಿ ಶ್ರೀ ಜಗದ್ಗುರುಗಳವರು ಪೂರ್ವಾಶ್ರಮದ ತಾಯಿಯವರು ನಮ್ಮನ್ನು ಬಹುವಾಗಿ ನೆನಪಿಸಿಕೊಳ್ಳುತ್ತಿರುವ ಬಗ್ಗೆ ಬರೆದಿದ್ಧರೂ ಶ್ರೀ ಜಗದ್ಗುರುಗಳವರ ಮನಸ್ಸು ಮಾತ್ರ ತಮ್ಮ ಪರಮಾರಾಧ್ಯ ಗುರುವಿನ ದರ್ಶನಕ್ಕೆ ಎಷ್ಟೊಂದು ತವಕಿಸುತ್ತಿತ್ತು ಎಂಬುದು ವ್ಯಕ್ತವಾಗುತ್ತದೆ. ಲಿಂಗೈಕ್ಯ ಗುರುಗಳನ್ನು ಕನಸಿನಲ್ಲಿ ದರ್ಶನವಾಗಿದ್ದನ್ನು, ದೊಡ್ಡ ಗುರುಗಳ ಪಾದದ ಮೇಲೆ ತಲೆಯೋರಿ ತುಂಬಾ ಹೊತ್ತು ಮೇಲೆ ಏಳಲೇ ಇಲ್ಲ, ನಂತರ ಗುರುಗಳು ರುದ್ರಾಕ್ಷಿ ಮಾಲೆಯನ್ನು ಕೊರಳಿಗೆ ಹಾಕಿರುವ ಬಗ್ಗೆ ಎಂದು ಉಲ್ಲೇಖಿಸಿದ್ದಾರೆ ಅಬ್ಬಾ….!!! ಎಂತಹ ದೈವತ್ವ ಪೂರ್ಣವಾದ ನಿರ್ವಾಜ್ಯ ಭಕ್ತಿ…!!!
ಸತ್ಯಪೂರ್ಣ, ಅಮೂಲ್ಯ, ಅಚಿಂತ್ಯ, ಅಗಮ್ಯವೆಂಬುದು..!!
ಎಸ್ ಎಸ್ ಎಲ್ ಸಿ, ಪಾಸ್ ಮಾಡಲು ಯೋಗ್ಯತೆ ಇಲ್ಲದೆ, ಬಿಳೀ ಅಂಗಿ ಬೇತಾಳನ ಬಿಸ್ಕತ್ತಿಗಾಗಿ ಬದುಕುವ ರೋಗಗ್ರಸ್ತರಿಗೇನೂ ಗೊತ್ತು ಶ್ರೀ ಜಗದ್ಗುರುಗಳವರು ಸತ್ಯಪೂರ್ಣ, ಅಮೂಲ್ಯ, ಅಚಿಂತ್ಯ, ಅಗಮ್ಯವೆಂಬುದು….!!!
ಸೂರ್ಯನ ಕಿರಣ ಕೊಳಕಾಗಲ್ಲ, ಚಿಂತನೆಗಳು ಮರೆಯಾಗಲ್ಲ:
ಸೂರ್ಯನ ಕಿರಣಗಳು ಕೊಳಕು ಇರುವ ಜಾಗಕ್ಕೂ ಹೋಗುತ್ತದೆ. ಆದರೆ ಅದು ಕೊಳಕಾಗುವುದಿಲ್ಲ. ಶ್ರೀ ಜಗದ್ಗುರುಗಳವರ ದೂರದೃಷ್ಟಿ ಚಿಂತನೆಗಳು, ಜನಮುಖಿ ಕಾರ್ಯಗಳು ಸೂರ್ಯನ ಕಿರಣಗಳಂತೆ ಅವು ಯಾವ ಜಾಗಕ್ಕೆ ಹೋದರೂ, ಯಾರ ಜೊತೆ ಇದ್ದರೂ ಬೆಳಕಾಗಿರುತ್ತವೆ ಹೊರತು ಕೊಳಕಾಗಿರುವುದಿಲ್ಲ?
ಮಾಹಿತಿ ಮತ್ತು ಬರಹ: ರೂಪ