SUDDIKSHANA KANNADA NEWS/ DAVANAGERE/ DATE:01-03-2025
ದಾವಣಗೆರೆ: ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತಂದ ಹಾಗೂ ಬಿಜೆಪಿ ಪಕ್ಷ ಬಲಿಷ್ಠಗೊಳಿಸಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಜೊತೆ ನಿಲ್ಲೋಣ. ವಿರೋಧಿಗಳಿಗೆ ತಕ್ಕ ಉತ್ತರ ನೀಡೋಣ ಎಂದು ವೀರಶೈವ ಲಿಂಗಾಯತರ ಮಹಾಸಂಗಮ ಪೂರ್ವ ಸಿದ್ಧತಾ ಸಭೆಯು ತೀರ್ಮಾನಿಸಿತು.
ದಾವಣಗೆರೆ ಶ್ರೀನಿಧಿ ಕನ್ವೇಷನ್ ಹಾಲ್ ನಲ್ಲಿ ದಾವಣಗೆರೆ. ಚಿತ್ರದುರ್ಗ. ಹಾವೇರಿ. ಜಿಲ್ಲೆಗಳ ವೀರಶೈವ ಲಿಂಗಾಯತರ ಮಹಾಸಂಗಮ ಪೂರ್ವ ಸಿದ್ಧತಾ ಸಭೆ ಕಾರ್ಯಕ್ರಮ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಬಹುತೇಕರು
ಬಿಜೆಪಿ ಇಂದು ಕರ್ನಾಟಕದಲ್ಲಿ ಇಷ್ಟೊಂದು ಬಲಾಢ್ಯವಾಗಿರಲು, ಅಧಿಕಾರಕ್ಕೆ ಬರಲು ಕಾರಣ ಯಡಿಯೂರಪ್ಪರ ಹೋರಾಟ. ಆದ್ರೆ ಕೆಲವರು ಯಡಿಯೂರಪ್ಪರ ಕುಟುಂಬದ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದು, ಇವರಿಗೆ
ತಕ್ಕ ಪಾಠ ಕಲಿಸೋಣ ಎಂದು ಎಚ್ಚರಿಕೆ ನೀಡಿತು.
ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು, ಪಕ್ಷದ ಅಳಿವು ಬೆಳವಣಿಗೆಗಾಗಿ ಎಲ್ಲಾ ವೀರಶೈವರು ಒಗ್ಗಟ್ಟಾಗಬೇಕು ಮತ್ತು ರಾಜ್ಯದ ಹಿರಿಯರು ನಮ್ಮೆಲ್ಲರ ನಾಯಕರಾದ ಯಡಿಯೂರಪ್ಪನವರ ಕೈ ಬಲಪಡಿಸಲು ನಾವೆಲ್ಲರೂ ಅವಿರತ ಶ್ರಮ ವಹಿಸಬೇಕು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ನಮ್ಮೆಲ್ಲರ ಗುರಿ ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವುದು. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವಂತಾಗಲು ಯಡಿಯೂರಪ್ಪರ ಮಾರ್ಗದರ್ಶನ ಸಹಕಾರ ಅತ್ಯಗತ್ಯ. ವಿಜಯೇಂದ್ರ ಅವರ ಕಾರ್ಯವೈಖರಿ ನೋಡಿದರೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ವೀರಶೈವ ಲಿಂಗಾಯತರು ಈ ಹಿಂದೆ ಯಾವ ರೀತಿ ಬಿಜೆಪಿ ಸಹಕರಿಸಿದ್ದೇವೋ ಅದೇ ರೀತಿ ಮುಂದಿನ ದಿನಗಳಲ್ಲಿ ಮತ್ತಷ್ಟು ವೀರಶೈವ ಲಿಂಗಾಯತ ಬಿಜೆಪಿ ಮುಖಂಡರು ಶ್ರಮಿಸೋಣ ಎಂದು ಕರೆ ನೀಡಿದರು.
ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ್, ಅಶೋಕ್ ಪೂಜಾರಿ ಸೇರಿದಂತೆ ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ವೀರಶೈವ ಮಹಾಸಭಾ ಮುಖಂಡರುಗಳು ಉಪಸ್ಥಿತರಿದ್ದರು.
ಸಭೆಗೆ ಮುನ್ನ ದಾವಣಗೆರೆ ನಗರ ಸಮೀಪ ಶಾಮನೂರು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮಾಜಿ ಸಚಿವರುಗಳು, ಮಾಜಿ ಶಾಸಕರುಗಳು, ಜಿಲ್ಲಾ ಮುಖಂಡರುಗಳು ಭೇಟಿ ನೀಡಿ ಪೂಜೆ ಸಲ್ಲಿಸಿದರು.