SUDDIKSHANA KANNADA NEWS/ DAVANAGERE/ DATE:14-04-2025
ದಾವಣಗೆರೆ: ಸರ್ವಾಧಿಕಾರ ಅಳಿಯಲಿ ಸಂವಿಧಾನ ಉಳಿಯಲಿ ಎಂಬ ಘೋಷಣೆಯೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ನಗರದ ಅಂಬೇಡ್ಕರ್
ವೃತ್ತದಲ್ಲಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣೆ ಪ್ರಯುಕ್ತ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಣೆ ಮಾಡಲಾಯಿತು.
ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಫಯಾಜ್ ಅಹಮದ್ ಮಾತನಾಡಿ ಡಾ. ಬಾಬಾಸಾಹೆಬ್ ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ, ಪ್ರತಿವರ್ಷದಂತೆ ಈ ವರ್ಷವೂ ಏಪ್ರಿಲ್ 14ರಂದು ಎಸ್ ಡಿಪಿಐ
ರಾಜ್ಯಾದ್ಯಂತ “ಸಾಮಾಜಿಕ ನ್ಯಾಯ ದಿನ” ವಾಗಿ ಆಚರಿಸುತಿದ್ದು, ಸರ್ವಾಧಿಕಾರ ಅಳಿಯಲಿ, ಸಂವಿಧಾನ ಉಳಿಯಲಿ ಎಂದು ಹೇಳಿದರು.
ಅಂಬೇಡ್ಕರ್ ಅವರ ಕನಸಾಗಿದ್ದ ಸಮ ಸಮಾಜ ನಿರ್ಮಾಣದೊಂದಿಗೆ ಸಂವಿಧಾನಿಕ ಮೌಲ್ಯಗಳು, ಸಮಾನತೆ, ನ್ಯಾಯ ಮತ್ತು ಮಾನವೀಯತೆಯ ಸಂದೇಶವನ್ನು ನಾವು ಈ ದಿನದ ಮೂಲಕ ಮತ್ತೆ ಒತ್ತಿ ಹೇಳುತ್ತಿದ್ದೇವೆ
ಎಂದರು.
ಇಂದಿನ ದಿನಗಳಲ್ಲಿ ಕೇಂದ್ರ ಒಕ್ಕೂಟ ಸರ್ಕಾರ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಹಾಳುಮಾಡುತ್ತ, ಜನ ವಿರೋಧಿ ಹಾಗೂ ಸರ್ವಾಧಿಕಾರಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಈ ದಿನವನ್ನು
ಸಂವಿಧಾನ ರಕ್ಷಣೆಯ ದಿನವನ್ನಾಗಿ ಪರಿಗಣಿಸುತ್ತೇವೆ. ಆದ್ದರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಆಶಯವಾದ ಸಮಸಮಾಜ ನಿರ್ಮಾಣಕ್ಕಾಗಿ ನಾವೆಲ್ಲರೂ ಜಾತಿ ಭೇದ, ವರ್ಗ ಮತ್ತು ಧರ್ಮವನ್ನು ಬಿಟ್ಟು ಸಮ ಸಮಾಜ
ನಿರ್ಮಾಣಕ್ಕಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಆರ್ ತಾಹೀರ್, ಜಿಲ್ಲಾ ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ
ಅಧ್ಯಕ್ಷ ಏಜಾಜ್ ಅಹಮದ್, ಹಾಗೂ ಇಮ್ರಾನ್, ಇಬ್ರಾಹಿಮ್, ಜಬಿ,ಅಫಜಲ್ ಮತ್ತು ಬೆಂಬಲಿಗರು ಹಾಗೂ ಇತರರು ಉಪಸ್ಥಿತರಿದ್ದರು.