SUDDIKSHANA KANNADA NEWS/ DAVANAGERE/ DATE-05-06-2025
ಬೆಂಗಳೂರು: ಆರ್ ಸಿ ಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಘಟನೆ ದು:ಖಕರವಾಗಿದ್ದು, ಮೃತಪಟ್ಟವರಿಗೆ ಸಚಿವ ಸಂಪುಟ ಸಭೆಯಲ್ಲಿ ಸಂತಾಪ ಕೋರಲಾಯಿತು. ಇಂದು ಎಂದಿನಂತೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ನಿನ್ನೆ ನಡೆದ ಅಹಿತಕರ ಘಟನೆ ಬಗ್ಗೆ ಚರ್ಚಿಸಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರು ಜಸ್ಟೀಸ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಲಾಗಿದೆ. ಆರ್ ಸಿ ಬಿ ಸಂಸ್ಥೆ ಹಾಗೂ ಕಾರ್ಯಕ್ರಮ ಆಯೋಜಕರಾದ ಡಿಎನ್ ಎ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈ ಮೂರು ಸಂಸ್ಥೆಗಳ ಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು, ಬಂಧಿಸಲು ಸೂಚನೆ ನೀಡಲಾಗಿದೆ. ಇವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಪೊಲೀಸ್ ಇನ್ಸಪೆಕ್ಞರ್ ಸೇರಿದಂತೆ ಆ ಭಾಗದ ಎಸಿಪಿ, ಸೆಂಟ್ರಲ್ ಡಿಸಿಪಿ, ಕ್ರೀಡಾಂಗಣದ ಉಸ್ತುವಾರಿ ವಹಿಸಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ಬೆಂಗಳೂರು ನಗರದ ಪೊಲೀಸ್ ಕಮೀಷನರ್ ಸೇರಿ ಅಧಿಕಾರಿಗಳ ಬೇಜವಾಬ್ದಾರಿತನ, ಅಲಕ್ಷ್ಯ ಕಂಡುಬರುತ್ತಿದ್ದು, ಇವರುಗಳನ್ನು ಅಮಾನತ್ತುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ನಾನು ಶಾಸಕರು, ಸಚಿವ, ಡಿಸಿಎಂ ಹಾಗೂ ಮುಖ್ಯಮಂತ್ರಿಯಾದ ನಂತರ ಇಂತಹ ಘಟನೆ ನಡೆದಿರಲಿಲ್ಲ. ಈ ಘಟನೆ ನಮ್ಮನ್ನು ಘಾಸಿಗೊಳಿಸಿದೆ. ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಟುಂಬದವರ ಜೊತೆ ಸರ್ಕಾರವಿದೆ
ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.