SUDDIKSHANA KANNADA NEWS/ DAVANAGERE/ DATE-29-04-2025
ಬೆಂಗಳೂರು: ಗ್ರಾಮ ಆಡಳಿತಾಧಿಕಾರಿಗಳು ತಮ್ಮ ವ್ಯಾಪ್ತಿಯ ಪಂಚಾಯಿತಿಯ ಕೇಂದ್ರಸ್ಥಾನದಲ್ಲಿಯೇ ವಾಸ್ತವ್ಯವಿರುವುದರಿಂದ ರೈತರಿಗೆ ಎಲ್ಲ ಸಮಯದಲ್ಲಿಯೂ ಲಭ್ಯವಿರಲು ಸಾಧ್ಯವಾಗುತ್ತದೆ. ರೈತರ ಮನೆಮನೆಗೆ
ಭೇಟಿ ನೀಡಿ ಅವರ ಕುಂದುಕೊರತೆಗಳನ್ನು ಆಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅವರು ಕಂದಾಯ ಇಲಾಖೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ 1000 ಗ್ರಾಮ ಆಡಳಿತಾಧಿಕಾರಿಗಳಿಗೆ ನೇಮಕಾತಿ ಆದೇಶ ವಿತರಣೆ, ಅಭಿಶಿಕ್ಷಣ ತರಬೇತಿ ಮತ್ತು 4000 ಕ್ರೋಮ್ ಬುಕ್ ವಿತರಣೆ ಹಾಗೂ ಸಾಧನೆಯ ಹಾದಿಯಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಗ್ರಾಮ ಆಡಳಿತಾಧಿಕಾರಿಗಳ 9834 ಮಂಜೂರಾದ ಹುದ್ದೆಗಳಿಗೆ ಲ್ಯಾಪಟಾಪ್ ನೀಡಲು ಸರ್ಕಾರ ನಿರ್ಧರಿಸಿದ್ದು, ಮೊದಲನೇ ಹಂತದಲ್ಲಿ 4000 ಲ್ಯಾಪ್ ಟಾಪ್ ಗಳನ್ನು ಇಂದು ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೆ ರೈತರಿಗೆ ತೊಂದರೆ ಕೊಡುವುದಾಗಲಿ, ಭ್ರಷ್ಟಾಚಾರಕ್ಕಾಗಲಿ ಅವಕಾಶ ಕೊಡಬಾರದು. ಸಣ್ಣ ಹಿಡುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರಿಗೆ ಅನುಕೂಲ ಕಲ್ಪಿಸುವುದು ಗ್ರಾಮ ಆಡಳಿತಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದರು.
ಭೂಮಿ ಬೀಟ್ ಕಾರ್ಯಕ್ರಮ:
ಕೃಷಿ, ಲಾಭದಾಯಕ ವೃತ್ತಿಯಾಗಿ ಉಳಿದುಕೊಂಡಿಲ್ಲ. ಅನ್ನದಾತರ ಹಾಗೂ ನಾಡಿನ ಒಳಿತಿಗೆ ಕೆಲಸ ಮಾಡುತ್ತಿರುವ ಅರಿವಿರಬೇಕು. ರೈತರಿಗೆ ಭೂಮಿ ಬೀಟ್ ಕಾರ್ಯಕ್ರಮ ಸರ್ಕಾರ ಜಾರಿಗೆ ತಂದಿದೆ. ವಿದ್ಯಾರ್ಥಿದೆಸೆಯಲ್ಲಿ ವ್ಯವಸಾಯ ಕೈಗೊಂಡ ಸಂದರ್ಭದಲ್ಲಿ ಪಕ್ಕದ ರೈತ ಜಮೀನನ್ನು ಅತಿಕ್ರಮಣ ಮಾಡಿದ್ದು, ಈ ಬಗ್ಗೆ ನಡೆದ ಪಂಚಾಯತಿಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡ ಮುಖ್ಯಮಂತ್ರಿಗಳು, ಜಮೀನುಗಳನ್ನು ಅತಿಕ್ರಮಣದ ಇಂತಹ ಸಮಸ್ಯೆಗಳನ್ನು ನಿವಾರಿಸಲು ಭೂಮಿ ಬೀಟ್ ಕಾರ್ಯಕ್ರಮ ಅನುಕೂಲ ಕಲ್ಪಿಸಿದೆ ಎಂದರು.
ರೈತರಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಿ:
ಗ್ರಾಮ ಆಡಳಿತಾಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ, ರೈತರಿಗೆ ಅನ್ಯಾಯವಾಗದಂತೆ ಕರ್ತವ್ಯ ನಿರ್ವಹಿಸಬೇಕು. ಜಮೀನಿನ ದಾಖಲಾತಿಗಳ ಹಾಗೂ ಸರ್ವೇಗಳು ಸಮರ್ಪಕವಾಗಿ ನಡೆದರೆ ಗ್ರಾಮಗಳಲ್ಲಿ ಭೂಮಿ ಕಲಹವಿಲ್ಲದೇ ಬಹುಮಟ್ಟಿಗೆ ನೆಮ್ಮದಿ ನೆಲಸಲು ಸಾಧ್ಯವಿದೆ. ಇಂದು ನೇಮಕಗೊಂಡಿರುವ ಗ್ರಾಮ ಆಡಳಿತಾಧಿಕಾರಿಗಳು ಉದಾಸೀನತೆಯ ಭಾವನೆಯನ್ನು ತಳೆಯದೇ ಪ್ರಾಮಾಣಿಕವಾಗಿ ದುಡಿಯಬೇಕು ಎಂದು ತಿಳಿಸಿ ಶುಭ ಹಾರೈಸಿದರು.