SUDDIKSHANA KANNADA NEWS/ DAVANAGERE/ DATE:01-02-2025
ದಾವಣಗೆರೆ: ಸುಸ್ಥಿರ ಕೃಷಿ ಕಡೆಗೆ ನಮ್ಮ ನಡಿಗೆ ಎಂಬ ಧೈಯದೊಂದಿಗೆ ದಾವಣಗೆರೆ ಜಿಲ್ಲೆಯಲ್ಲಿ ಹಸಿರೋತ್ಸವ ಫೋರಂ ವತಿಯಿಂದ ಬೃಹತ್ ಕೃಷಿ ಉತ್ಸವವನ್ನು ಫೆ. 19ರಿಂದ 23ರವರೆಗೆ ದಾವಣಗೆರೆ ಜಿಲ್ಲಾ ಪಂಚಾಯತ್ ಸಹಕಾರದೊಂದಿಗೆ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಉತ್ಸವದ ಆಯೋಜಕರು ಹಾಗೂ ,ಕೃಷಿ ವಿಜ್ಞಾನಿಗಳಾದ ಆರತಿ ಹಾಗೂ ನೀತಾ ರೈನಾ ಅವರು, ಈ ಕೃಷಿ ಉತ್ಸವವನ್ನು ಕರ್ನಾಟಕ ರಾಜ್ಯ ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳ ಸಂಪೂರ್ಣ ಸಹಯೋಗ ಮತ್ತು ಎಲ್ಲಾ ಕೃಷಿ ಸಂಬಂಧಿತ ಇಲಾಖೆಗಳ ಸಹಕಾರ ದೊರಕುತ್ತಿದ್ದು ಈ ಕೃಷಿ ಉತ್ಸವ ಬೃಹತ್ ಕೃಷಿ ಮೇಳ ಆಗಿದೆ ಎಂದರು.
ಹಸಿರೋತ್ಸವ ಫೋರಮ್ ಮತ್ತು ದಾವಣಗೆರೆ ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳ ವತಿಯಿಂದ ಆಯೋಜಿಸಲಾಗಿರುವ ಕೃಷಿ ಉತ್ಸವದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಮನವಿ ಮಾಡಿದರು.
ಕೃಷಿಯಲ್ಲಿ ಪರಿಕರಗಳ ವೆಚ್ಚ ಹೆಚ್ಚಾಗುತ್ತಿದ್ದು ಬೆಳೆ ಬೆಳಯುವ ಖರ್ಚು ಹೆಚ್ಚಾಗುತ್ತಿರುವುದರಿಂದ ಆದಾಯದ ಕಡೆಗೆ ಮುಖ ಮಾಡಿ ನಿಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ರವರ ಸಹಯೋಗದೊಂದಿಗೆ ನಡೆಸಲಾಗುತ್ತಿರುವ ಕೃಷಿ ಉತ್ಸವದಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸಿ ಖರ್ಚನ್ನು ಯಾವ ರೀತಿ ಕಡಿಮೆ ಮಾಡಬಹುದೆಂದು ತಿಳಿಸುವ ಒಂದು ಪ್ರಯತ್ನ. ಇದಕ್ಕೆ ತಮ್ಮೆಲ್ಲರ ಸಹಕಾರ ಅವಶ್ಯಕ ಎಂದು ಹೇಳಿದರು.
ಈ ಉತ್ಸವದಲ್ಲಿ 300 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಇದರಲ್ಲಿ ಹೈನುಗಾರಿಕೆ, ತೋಟಗಾರಿಕೆ, ಕೃಷಿಬೆಳಗಳು, ರೇಷ್ಮೆ, ಮೀನುಗಾರಿಕೆ, ಹೈಟೆಕ್ ಕೃಷಿ, ಮಣ್ಣು ರಹಿತ ಬೇಸಾಯ, ಸರಿಯಾದ ಬಳಕೆ, ಹೆಚ್ಚುವರಿ ಹಾಲು ನೀಡುವ ಗೋವುಗಳ ಪರಿಚಯ, ಹೊಸ ತಳಿಗಳಾದ ಕುರಿ, ಮೇಕೆ, ಕೋಳಿ ಸಾಕಾಣಿಕೆಯ ಪರಿಚಯ, ಕೃಷಿ, ತೋಟಗಾರಿಕೆ ಬೆಳೆಗಳ ಮೌಲ್ಯವರ್ದನೆ, ಸಂಸ್ಕರಣೆ ಮತ್ತು ಆಧುನಿಕ ಕೃಷಿ ಯಂತ್ರೋಪಕರಣಗಳುಳ್ಳ ಮಳಿಗೆಗಳನ್ನು ಹೊಂದಿರುತ್ತವೆ ಎಂದು ವಿವರಿಸಿದರು.
ರೈತರ ಜೊತೆ ಕೃಷಿ ಮಾತುಕತೆ, ಸಂವಾದ, ತಂತ್ರಜ್ಞಾನಗಳ ಕುರಿತು ತರಬೇತಿ ಹಾಗೂ ವಿಚಾರ ಸಂಕಿರಣ, ವಿಚಾರ ಗೋಷ್ಠಿ ಏರ್ಪಡಿಸಲಾದೆ. ರೈತರ ಮಾನಸಿಕ ಆರೋಗ್ಯ ಯೋಗ ಕ್ಷೇಮಕ್ಕಾಗಿ ಪ್ರಾಣ್ ಪರಿವರ್ಥನ್ ಸಂಸ್ಥೆ ವತಿಯಿಂದ ಸಲಹಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರಕ್ಕೆ ಅನ್ನದಾತನ ಕೊಡುಗೆಯನ್ನು ಗೌರವಿಸಲು ಕೃಷಿಯಲ್ಲಿನ ಶ್ರೇಷ್ಠತೆ ಮತ್ತು ಆವಿಷ್ಕಾರಕ್ಕಾಗಿ ಅರ್ಹ ರೈತರನ್ನು ಅನ್ನದಾತ ರತ್ನ ಪ್ರಶಸ್ತಿಗೆ ಗುರುತಿಸಲಾಗುವುದು. ಅರ್ಹ ರೈತರು ಅರ್ಜಿಯನ್ನು ಸಲ್ಲಿಸಲು ಈ ನಂಬರ್ ಗೆ 9916596396, 8861432947 ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಅನ್ನದಾತರಿಗೆ ನಮ್ಮ ನಮನ ಸಲ್ಲಿಸುವ ಉದ್ದೇಶದಿಂದ ಬೆಂಗಳೂರಿನಿಂದ ದಾವಣಗೆರೆಯವರೆಗೆ ಸ್ಪೆಷಲ್ ಇನಿಶಿಯೇಟಿವ್ ರೈಡರ್ಸ್ ವತಿಯಿಂದ ಬೈಕ್ ರಾಲಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ವಿಜ್ಞಾನಿ ಪ್ರೇಮಾ ಹಾಜರಿದ್ದರು.