SUDDIKSHANA KANNADA NEWS/ DAVANAGERE/ DATE:15-11-2024
ದಾವಣಗೆರೆ: ನಗರದ ಶಿವಯೋಗಿ ಮಂದಿರದಲ್ಲಿ ನ. 16ರಂದು 69ನೇ ಕರ್ನಾಟಕ ರಾಜ್ಯೋತ್ಸವ ಆಯೋಜಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ದೊಡ್ಮನಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯು ಪ್ರತಿವರ್ಷವೂ ಕರ್ನಾಟಕ ರಾಜ್ಯೋತ್ಸವ ನಡೆಸಿಕೊಂಡು ಬರುತ್ತಿದ್ದು, ಅಂದು ಸಂಜೆ 6 ಗಂಟೆಗೆ ನಗರದ ಶಿವಯೋಗಿ ಮಂದಿರದಲ್ಲಿ ರಾಜ್ಯೋತ್ಸವ ಆಚರಿಸಲಾಗುವುದು ಎಂದರು.
ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಜಿ ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದು, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಸಂಸದೆ ಡಾ.
ಪ್ರಭಾ ಮಲ್ಲಿಕಾರ್ಜುನ್ ಅವರು ಭುವನೇಶ್ವರಿ ಭಾವಚಿತ್ರ ಅನಾವರಣ ಮಾಡಲಿದ್ದಾರೆ. ವೇದಿಕೆ ರಾಜ್ಯಾಧ್ಯಕ್ಷ ಕೆ. ಜಿ. ಯಲ್ಲಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಬಿ.ದೇವೇಂದ್ರಪ್ಪ, ಕೆ.ಎಸ್ ಬಸವಂತಪ್ಪ,ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಎಸ್ಪಿ ಉಮಾ ಪ್ರಶಾಂತ್, ಮೇಯರ್ ಕೆ. ಚಮನ್ ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ್, ಮಾಜಿ ಶಾಸಕ ಎಸ್.ವಿ ರಾಮಚಂದ್ರ, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್, ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಸೇರಿದಂತೆ ಜಿಲ್ಲೆಯ ಮುಖಂಡರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಗುವುದು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಜಯವಾಣಿ ಹಿರಿಯ ವರದಿಗಾರ ರಮೇಶ್ ಜಹಗೀರದಾರ್, ರಿಪಬ್ಲಿಕ್ ವಾಹಿನಿಯ ವಿಡಿಯೋ ಜರ್ನಲಿಸ್ಟ್ ಶಿವರಾಜ್ ಈಳಿಗೇರ್, ದಾವಣಗೆರೆ ಟೈಮ್ಸ್ ಸಂಪಾದಕ ಜೆ. ಎಸ್. ವೀರೇಶ್ ಸೇರಿದಂತೆ ಹಲವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮದ ನಂತರ ಶ್ರೀ ಭಾರತಿ ವಾದ್ಯವೃಂದವರಿಂದ ರಸಮಂಜರಿ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂತೋಷ್ ದೊಡ್ಮನಿ ತಿಳಿಸಿದರು.
ಗೋಷ್ಠಿಯಲ್ಲಿ ವೇದಿಕೆಯ ಅಮ್ಜದ್ ಅಲಿ, ಬಿ. ದಯಾನಂದ, ಬಾಬುರಾವ್, ಸಿದ್ದೇಶ್, ಎಂ.ರವಿ, ಮಹಾಲಿಂಗಪ್ಪ, ಮಂಜುನಾಥ್, ಚಂದ್ರು, ಗದಿಗೆಪ್ಪ ಹಾಜರಿದ್ದರು.