SUDDIKSHANA KANNADA NEWS/ DAVANAGERE/ DATE:20-03-2025
ಬೆಂಗಳೂರು: ಮರಾಠಿಗರ ಪುಂಡಾಟ ಬಂದ್ ಆಗಬೇಕು. ಬೆಳಗಾವಿ ಉಳಿಸಬೇಕು, ಎಂಇಎಸ್ ನಿಷೇಧಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆ ಕೊಡಲಾಗಿದೆ.
ಬೆಳಿಗ್ಗೆ ಆರು ಗಂಟೆಗೆ ಶುರುವಾಗಲಿರುವ ಬಂದ್ ಸಂಜೆ ಆರು ಗಂಟೆಯವರೆಗೆ ನಡೆಯಲಿದೆ. ಕನ್ನಡಿಗರ ಅಸ್ತಿತ್ವ, ಉಳಿವು, ಕನ್ನಡ ಹಾಗೂ ಕನ್ನಡಿಗರ ಮೇಲೆ ಆಗುತ್ತಿರುವ ದಬ್ಬಾಳಿಕೆ ತಡೆಗೆ ಕರೆ ಕೊಟ್ಟಿರುವ ಬಂದ್ ಗೆ
ಕನ್ನಡಪರ ಸಂಘಟನೆಗಳು ಸಾಥ್ ಕೊಟ್ಟಿದ್ದರೆ, ಕೆಲ ಸಂಘಟನೆಗಳು ಇನ್ನೂ ಬೆಂಬಲ ಘೋಷಿಸಿಲ್ಲ.
ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅಖಂಡ ಬಂದ್ ನಡೆಯುವುದು ಖಚಿತ. ಯಾವುದೇ ಕಾರಣಕ್ಕೂ ಬಂದ್ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಕನ್ನಡಿಗರ ಮೇಲಾಗುತ್ತಿರುವ ದೌರ್ಜನ್ಯ ತಡೆಯಲೇಬೇಕು ಎಂಬ ನಿಟ್ಟಿನಲ್ಲಿ ಬಂದ್ ನಡೆಸಲಾಗುತ್ತಿದೆ. ಬಂದ್ ನಡೆದೇ ತೀರುತ್ತದೆ ಎಂದು ಘೋಷಿಸಿದ್ದಾರೆ.
ಹೊರರಾಜ್ಯ, ಸಂಸತ್ ಗಮನ ಸೆಳೆಯಲು ಮಾರ್ಚ್ 22ರಂದು ಕರ್ನಾಟಕ ಬಂದ್ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ.ಮಹಾರಾಷ್ಟ್ರದವರು ಕನ್ನಡಿಗರ ಮೇಲಿನ ಪುಂಡಾಟಿಕೆ ನಿಲ್ಲಿಸುತ್ತಿಲ್ಲ. ಕರ್ನಾಟಕದ ಕೆ ಎಸ್ ಆರ್ ಟಿ ಸಿ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಗೆ ಮರಾಠಿ ಪುಂಡರು ಮಸಿ ಬಳಿದಿದ್ದು ಅಲ್ಲದೇ ಹಲ್ಲೆ ನಡೆಸಿದ್ದಾರೆ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ರಾಜ್ಯದ ಗಡಿನಾಡುಗಳು ಬೆಳವಣಿಗೆ ಆಗಬೇಕು. ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮುಂದಾಗಬೇಕು. ಶಿವಸೇನೆ ಹಾಗೂ ಎಂ.ಇ.ಎಸ್. ಪುಂಡರನ್ನು ಕೂಡಲೇ ಗಡಿಪಾರು ಮಾಡಬೇಕು. ಕನ್ನಡಿಗರ ಮತ ಪಡೆದು ಅಧಿಕಾರದಲ್ಲಿರುವ ಎಲ್ಲಾ ಜನಪ್ರತಿನಿಧಿಗಳು ರಾಜೀನಾಮೆ ಕೊಡಬೇಕು. ಕರುನಾಡಿನ ಬಸ್ ಡ್ರೈವರ್ ಮೇಲೆ ಹಲ್ಲೆ ನಡೆಸಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂಬುದೂ ಸೇರಿದಂತೆ 20 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಂದ್ ನಡೆಸಲಾಗುತ್ತಿದೆ ಎಂದು ವಾಟಾಳ್ ನಾಗರಾಜ್ ಮಾಹಿತಿ ನೀಡಿದ್ದಾರೆ.