SUDDIKSHANA KANNADA NEWS/ DAVANAGERE/ DATE:01-11-2023
ದಾವಣಗೆರೆ: ಶತ್ರುಗಳಲ್ಲೂ ಮಿತ್ರತ್ವವನ್ನು ಕಾಣುವ, ಆದರಿಸಿ ಗೌರವಿಸುವ ಹೃದಯ ವೈಶಾಲ್ಯ ಭಾವನೆಯನ್ನು ಹೊಂದಿರುವ ಕರ್ನಾಟಕವು ಜಗತ್ತಿಗೆ ಶಾಂತಿ ಮಂತ್ರ ಬೋಧಿಸುವ ಸಮೃದ್ಧ ರಾಜ್ಯ ಎಂದು ದಾವಣಗೆರೆ ವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ.ವಿ.ಜಯರಾಮಯ್ಯ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ಹೆಸರಾಯಿತು ಕರ್ನಾಟಕ-೫೦ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕವು ಜಗತ್ತಿನ ಎಲ್ಲವನ್ನೂ ಒಳಗೊಂಡ ಸಂಪದ್ಭರಿತ ನಾಡು. ಶಾಂತಿಯ ನೆಲವೀಡು. ಪ್ರೀತಿ, ಸೌಜನ್ಯ, ಸಂಬAಧಗಳ ಮೂಲಕ ಜಗತ್ತನ್ನು ತನ್ನತ್ತ ಸೆಳೆಯುವ ಶಕ್ತಿ ಕರ್ನಾಟಕಕ್ಕಿದೆ ಎಂದು ಹೇಳಿದರು.
ಕರ್ನಾಟಕವು ಭಾಷೆ. ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಪರಂಪರೆಯ ತವರೂರು. ಕನ್ನಡ ಭಾಷೆಯ ಸೊಬಗು, ಸ್ವಾದವನ್ನು ಉಳಿಸಿಕೊಂಡು ಕನ್ನಡತನವನ್ನು ಮರೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರಾದೇಶಿಕ ಅಸಮಾನತೆ, ಗಡಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕಾಗಿದೆ. ಆಗ ಭಾಷಾವಾರು ಪ್ರಾಂತ್ಯ ರಚನೆ ಮತ್ತು ಕರ್ನಾಟಕ ಏಕೀಕರಣದ ಮೂಲ ಉದ್ದೇಶ ಈಡೇರುವುದು ಎಂದು ತಿಳಿಸಿದರು.
ಕನ್ನಡದ ಮೊದಲ ಪದ ಸಿಗುವುದು ಮೊಣಕಾಲ್ಮೂರು ತಾಲ್ಲೂಕಿನ ಬ್ರಹ್ಮಗಿರಿ ಶಾಸನದಲ್ಲಿದೆ. ಚಿತ್ರದುರ್ಗದ ಚಂದ್ರವಳ್ಳಿ ತೋಟವು ಕದಂಬರ ಆಳ್ವಿಕೆಯ ಸಾಕ್ಷಿ ಕೇಂದ್ರ. ಗಂಗರು, ಮೌರ್ಯ, ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯಗಳ ಮೂಲ ಕೇಂದ್ರವೂ ಕರ್ನಾಟಕದಲ್ಲಿದೆ ಎಂಬ ಹೆಮ್ಮೆ ಕನ್ನಡಿಗರದು ಎಂದು ಹೇಳಿದರು.
ಕರ್ನಾಟಕ ಏಕೀಕರಣದ ಬಗ್ಗೆ ೧೯ನೇ ಶತಮಾನದಲ್ಲಿಯೇ ಡೆಪ್ಯೂಟಿ ಚೆನ್ನಬಸಪ್ಪ ಅವರು ಪ್ರಸ್ತಾಪಿಸಿದ್ದರು. ಉತ್ತರ ಕರ್ನಾಟಕದಲ್ಲಿ ಶುರುವಾಗಿದ್ದ ಕಾವು ದಕ್ಷಿಣ ಭಾಗಕ್ಕೆ ತಡವಾಗಿ ಹಬ್ಬಿತು. ಆದರೆ ಐದು ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಲು ಆಲೂರು ವೆಂಕಟರಾಯರು, ರೊದ್ದ ಶ್ರೀನಿವಾಸರಾಯರು, ಹುಯಿಲುಗೋಳ ನಾರಾಯಣರು, ಪಾಟೀಲ ಪುಟ್ಟಪ್ಪ ಸೇರಿದಂತೆ ಹಲವಾರು ಮುಖಂಡರ ಕೊಡುಗೆ ಸಾಕಷ್ಟಿದೆ. ಹೋರಾಟದ ಮೂಲಕ ಒಗ್ಗೂಡಿದ ಕರ್ನಾಟಕವನ್ನು ಅಭಿವೃದ್ಧಿಪಥದತ್ತ ಒಯ್ಯುವ ಜವಾಬ್ದಾರಿ ಕನ್ನಡಿಗರೆಲ್ಲರ ಮೇಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಕರ್ನಾಟಕದ ಏಕೀಕರಣಕ್ಕೆ ಶತಮಾನಗಳ ಇತಿಹಾಸವಿದೆ. ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಿ ಕರ್ನಾಟಕ ರಚನೆಯಾಯಿತು. ಕನ್ನಡ ಭಾಷೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದೆ ಎಂದರು.
ಕರ್ನಾಟಕದ ಏಕೀಕರಣಕ್ಕೆ ಮೈಸೂರು ಪ್ರಾಂತ್ಯದಿಂದ ಸಾಕಷ್ಟು ವಿರೋಧವಿತ್ತು. ಆದರೆ ಕರ್ನಾಟಕ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಇಡೀ ರಾಜ್ಯವೇ ಕೈಜೋಡಿಸಿತು. ಉತ್ತರ ಕರ್ನಾಟಕದ ಎಸ್.ಆರ್.ಕಂಠಿ, ಬಿ.ಡಿ.ಜತ್ತಿ, ವೀರೇಂದ್ರ ಪಾಟೀಲ ಮುಖ್ಯಮಂತ್ರಿಗಳಾಗಿದ್ದರೂ ಮೈಸೂರು ಕರ್ನಾಟಕವಾಗಲಿಲ್ಲ. ಎಸ್.ನಿಜಲಿಂಗಪ್ಪ ನಡೆಸಿದ ಪ್ರಯತ್ನವೂ ಫಲಿಸಲಿಲ್ಲ. ಆದರೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಒತ್ತಡಕ್ಕೆ ಮಣಿದು ಕರ್ನಾಟಕ ಏಕೀಕರಣ ಮಾಡುವುದು ಅನಿವಾರ್ಯವಾಯಿತು ಎಂದು ತಿಳಿಸಿದರು.
ಪ್ರಸ್ತುತ ಸಂದರ್ಭದಲ್ಲಿ ಕನ್ನಡಕ್ಕೆ ಕನ್ನಡಿಗರಿಂದಲೇ ಕುತ್ತು ಬರುತ್ತಿದೆ. ಭಾಷೆ, ಜಲ, ಗಡಿ, ಪ್ರಾದೇಶಿಕ ತಾರತಮ್ಯಗಳ ಸಮಸ್ಯೆಗಳ ನಿವಾರಣೆ ಆಗಬೇಕಾಗಿದೆ. ಕನ್ನಡಿಗರು ಎಷ್ಟೇ ಎತ್ತರಕ್ಕೆ ಬೆಳೆದು, ಜಗತ್ತಿನ ಯಾವುದೇ ಮೂಲೆಯಲ್ಲಿ ನೆಲೆಸಿದರೂ ಕನ್ನಡವನ್ನು ಮರೆಯಬಾರದು. ಕನ್ನಡದ ಅಭಿಮಾನ ರಕ್ತಗತವಾಗಿ ಬೆಳೆದು ಬರಬೇಕು ಎಂದರು.
ಕುಲಸಚಿವೆ ಬಿ.ಬಿ.ಸರೋಜ ಮಾತನಾಡಿ, ಪ್ರಾಂತ್ಯ ರಚನೆಯಿಂದ ಮೈಸೂರು ರಾಜ್ಯವಾಗಿದ್ದ ಕನ್ನಡ ನಾಡು ಕರ್ನಾಟಕ ರಾಜ್ಯವಾಗಿ ೫೦ ವರ್ಷ ಪೂರೈಸಿರುವುದು ಸಂಭ್ರಮಕ್ಕೆ ಕಾರಣವಾಗಿದೆ. ಕನ್ನಡಿಗರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ ಔದ್ಯೋಗಿಕವಾಗಿ ಅಭಿವೃದ್ಧಿಗೆ ಕೈಜೋಡಿಸಿ ಕರ್ನಾಟಕವನ್ನು ಶ್ರೀಮಂತಗೊಳಿಸಿದ್ದಾರೆ. ಕರ್ನಾಟಕದ ಈ ಪರಿವರ್ತನೆಗೆ ಕನ್ನಡವೇ ಪ್ರೇರಣೆ ಎಂದರು.
ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ ಮಾತನಾಡಿ, ನಾವು ಕನ್ನಡಿಗರು ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ಸಂಗತಿ. ಕನ್ನಡದ ಹಾಡು, ಭಾಷೆ, ಸಾಹಿತ್ಯಗಳು ಸ್ವಾಭಿಮಾನವನ್ನು ಎತ್ತಿ ತೋರಿಸುತ್ತವೆ. ಕನ್ನಡವನ್ನು ನಿತ್ಯವೂ ಬಳಸಿದರೆ ಭಾಷೆಗೆ ಆಳಿಗಾಲವಿಲ್ಲ. ಜಗತ್ತಿನಾದ್ಯಂತ ಕನ್ನಡದ ಕಂಪು ಪಸರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಹಣಕಾಸು ಅಧಿಕಾರಿ ಪ್ರೊ.ಆರ್.ಶಶಿಧರ ಮಾತನಾಡಿದರು. ಕನ್ನಡ ವಿಭಾಗದ ಅಧ್ಯಕ್ಷ ಡಾ.ಜೋಗಿನಕಟ್ಟೆ ಮಂಜುನಾಥ ಸ್ವಾಗತಿಸಿದರು. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. ಡಾ.ಎಚ್.ವಿ.ಶಾಂತರಾಜು ವಂದಿಸಿದರು.