SUDDIKSHANA KANNADA NEWS/ DAVANAGERE/ DATE:11-04-2025
ದಾವಣಗೆರೆ: ಪ್ರಚೋದನಕಾರಿ ಹೇಳಿಕೆ ಕೊಟ್ಟಿರುವ ಮಹಾನಗರ ಪಾಲಿಕೆ ಮಾಜಿ ಸದಸ್ಯ ಕಬೀರ್ ಖಾನ್ ಮತ್ತು ಸಹಚರರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಮುಖಂಡ ಕಬೀರ್ ಖಾನ್ ಮತ್ತು ಸಹಚರರು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರದ ವಕ್ಫ್ ಬಿಲ್ ವಿರೋಧಿಸುವ ಭರದಲ್ಲಿ ಮಾತನಾಡಿರುವುದು ಗಲಭೆ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದಂತಿದೆ ಎಂದು ಆರೋಪಿಸಿದರು.
ಸಿಎಂ, ಡಿಸಿಎಂ ಮತ್ತು ಜಿಲ್ಲಾ ಸಚಿವರಿಗೆ ಮನವಿ ಸಲ್ಲಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಆದ್ದರಿಂದ ಮುಸ್ಲಿಂ ಬಾಂಧವರಿಗೆ ನೀವು ಬೀದಿಗಿಳಿದು ಬಸ್ ಮತ್ತು ರೈಲಿಗೆ ಬೆಂಕಿ ಹಚ್ಚಿ ಪ್ರತಿ ಗ್ರಾಮಗಳಲ್ಲಿ ದಂಗೆ ಎಬ್ಬಿಸಿ ಜನರ ಪ್ರಾಣ ತೆಗೆಯಿರಿ. ಹುತಾತ್ಮರಾಗಿ ಎಂದು ಕರೆ ಕೊಟ್ಟು ಇಡೀ ನಗರದ ಸಾಮರಸ್ಯವನ್ನು ಹಾಳು ಮಾಡುವುದು ಇವರ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಕಬೀರ್ ಖಾನ್ ಈ ರೀತಿ ಉದ್ಘಟತನ ಮೆರೆಯುವುದಕ್ಕೆ ಮುಖ್ಯ ಕಾರಣ ಜಿಲ್ಲಾ ಉಸ್ಚುವಾರಿ ಸಚಿವರ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು. ಮತ ಬ್ಯಾಂಕ್ ಓಲೈಕೆ ರಾಜಕಾರಣ ಮಾಡುತ್ತಿರುವುದರಿಂದ ನಾವು ಏನೇ ಮಾಡಿದರೂ ನಮ್ಮನ್ನು
ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತದೆ ಎಂಬ ಕಾರಣಕ್ಕೆ ಈ ರೀತಿ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ದಾವಣಗೆರೆಯಲ್ಲಿ ಯಾವುದೇ ಕೋಮಗಲಭೆ ನಡೆದರೂ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಪಕ್ಷ, ಸಂಘ ಪರಿವಾರದ ಮುಖಂಡರನ್ನು ವಿನಾಃಕಾರಣ ಟೀಕೆ ಮಾಡುವುದರಿಂದ
ಈ ರೀತಿ ಕೀಡಿಗೇಡಿಗಳಿಗೆ ಪುಷ್ಟಿ ನೀಡಿದಂತಾಗಿದೆ. ದುಷ್ಟ ಶಕ್ತಿಗಳಿಗೆ ಪ್ರೋತ್ಸಾಹ ಕೊಟ್ಟಂತಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡನ ಈ ಹೇಳಿಕೆ ಬಗ್ಗೆ ಎಸ್. ಎಸ್. ಮಲ್ಲಿಕಾರ್ಜುನ್ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಗಳು ಪ್ರಚೋದನಕಾರಿ ಹೇಳಿಕೆ ಕೊಟ್ಟಿರುವ ಕಬೀರ್ ಖಾನ್ ಮತ್ತು ಸಹಚರನ್ನು ಕೂಡಲೇ ಬಂಧಿಸಬೇಕು. ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು. ಗೃಹ ಸಚಿವ ಡಾ. ಜಿ.
ಪರಮೇಶ್ವರ ಅವರು ಕೂಡಲೇ ಈ ಹೇಳಿಕೆ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರಲ್ಲದೇ, ಕ್ರಮ ತೆಗೆದುಕೊಳ್ಳದಿದ್ದರೆ ದಾವಣಗೆರೆ ಜಿಲ್ಲೆಯಾದ್ಯಂತ ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ಯಶವಂತರಾವ್ ಜಾಧವ್
ಎಚ್ಚರಿಕೆ ನೀಡಿದರು.
ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಮುಖಂಡರಾದ ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್ ಮತ್ತಿತರರು ಹಾಜರಿದ್ದರು.